ಕೂಡ್ಲಿಗಿ: ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಅನುಷ್ಠಾನಕ್ಕೂ ಮುನ್ನ ಬಂಜಾರ ಸಮುದಾಯದ ಬಡತನ ಹಾಗೂ ಬವಣೆಯನ್ನು ಸರ್ಕಾರ ಅರಿಯಬೇಕಿದೆ ಎಂದು ಚಿತ್ರದುರ್ಗ ಬಂಜಾರ ಸಮುದಾಯದ ಗುರು ಸರ್ದಾರ್ ಸೇವಾಲಾಲ್ ಮಹಾರಾಜ ಹೇಳಿದರು.
ಇದನ್ನೂ ಓದಿ: ಜು.20 ರಂದು ಬಂಜಾರ ಸಮುದಾಯದಿಂದ ಸಭೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕಿನ ಬಂಜಾರ ಸಮುದಾಯದ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಒಳಮೀಸಲಾತಿ ನೀಡುವ ಕುರಿತು ನಾಗಮೋಹನದಾಸ್ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮೀಸಲಾತಿ ನೀಡುವ ಮುನ್ನ ಸರ್ಕಾರ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿನ ಬಂಜಾರ ಸಮುದಾಯದ ತಾಂಡಗಳ ಜನರ ಕಷ್ಟ ಅರಿಯಬೇಕು ಎಂದರು.
ಮೊದಲಿನಿಂದಲೂ ಬಂಜಾರ ಜನಾಂಗ ಬಡತನದಿಂದ ಬಳಲುತ್ತಿದೆ. ಸಮುದಾಯದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು, ಕೆಲಸ ಅರಸಿ ದೂರದ ಜಿಲ್ಲೆಗಳಿಗೆ ಗುಳೆ ಹೋಗುತ್ತಾರೆ. ಜೀವನ ನಡೆಸಲು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಇದ್ದಾರೆ. ಇವರ ಬಗ್ಗೆ ಸರ್ಕಾರ ಕಣ್ಣು ತೆರದು ನೋಡಬೇಕಿದೆ ಎಂದು ಸಲಹೆ ನೀಡಿದರು.
ಬಡತನ, ನಿರುದ್ಯೋಗ ತಾಂಡವಾಡುತ್ತಿದೆ. ಇದನ್ನು ಗಮನಿಸದೆ ತರಾತುರಿಯಲ್ಲಿ ಜಾತಿ ಸಮೀಕ್ಷೆ ಮಾಡುವುದು ಸಮುದಾಯಕ್ಕೆ ನೀಡುವ ಅಗೌರವವಾಗಿದೆ. ನಾಗಮೋಹನದಾಸ್ ಆಯೋಗದ ವರದಿಯ ಸಂಪೂರ್ಣ ದತ್ತಾಂಶ ನಮಗೆ ನೀಡಬೇಕು. ಪಾರದರ್ಶಕವಾಗಿ ಜಾತಿ ಸಮೀಕ್ಷೆ ನಡೆದಿಲ್ಲ. ಆದ್ದರಿಂದ ಈ ವರದಿಯನ್ನು ಸಾರಸಗಟಾಗಿ ತಳ್ಳಿಹಾಕಬೇಕಂದು ಆಗ್ರಹಿಸಿ ಆ.20ರಂದು ಅಸಂಖ್ಯಾತ ಬಂಜಾರ ಜನಾಂಗದವರು ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ಸರ್ದಾರ್ ಸೇವಾಲಾಲ್ ಮಹಾರಾಜ ತಿಳಿಸಿದರು.
ಧೂಪದಹಳ್ಳಿ ಧರ್ಮಗುರು ಶಿವಪ್ರಕಾಶ್ ಮಹಾರಾಜ, ಬಂಜಾರ ಸಂಘಟನೆ ತಾಲೂಕು ಅಧ್ಯಕ್ಷ ವಾಸುದೇವ ನಾಯ್ಕ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯ್ಕ, ಪ್ರಮುಖರಾದ ಶಾಮನಾಯ್ಕ, ಲಾಲಸಿಂಗ್ ನಾಯ್ಕ, ಮಂಜೇಶ್, ವೆಂಕಟೇಶ್, ರಾಮ ನಾಯ್ಕ, ಬಾಲಾಜಿ, ರವಿನಾಯ್ಕ, ಪಾಂಡು ನಾಯ್ಕ, ಭೀಮಾ ನಾಯ್ಕ, ಶೇಕು ನಾಯ್ಕ, ಕೊಟ್ರೇಶ್, ದುಪಾದಹಳ್ಳಿ ಸೋಮಲಾ ನಾಯ್ಕ, ಮೋತಿಕಲ್ ತಾಂಡಾದ ನಿವೃತ್ತ ಶಿಕ್ಷಕ ಭೀಮಾ ನಾಯ್ಕ, ಸುನಿಲ್ ಕುಮಾರ್, ಹನುಮಾನ್ ನಾಯ್ಕ ಇತರರಿದ್ದರು.