

ಮಸ್ಕಿ: ತಲೇಖಾನ್ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಹಂಚಿಕೆ ವಿಚಾರದಲ್ಲಿ ಪಂಚಾಯಿತಿ ಸದಸ್ಯ ಮೌನೇಶ ರಾಠೋಡ ಮಾಡಿರುವ ಆರೋಪ ನಿರಾಧಾರವಾಗಿದ್ದು, ಸರ್ಕಾರದ ನಿಯಮದಂತೆ ವಿತರಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಉಮ್ಮವ್ವ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷೆ ಸ್ಥಾನದಲ್ಲಿರುವುದು ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಅನಗತ್ಯವಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
ಕಳೆದ ಮೂರು ವರ್ಷದ ಅಭಿವೃದ್ಧಿ ಕೆಲಸಗಳನ್ನು ತನಿಖೆ ನಡೆಸುವಂತೆ ಜಿಪಂಗೆ ದೂರು ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಕೇವಲ ನನ್ನ (8 ತಿಂಗಳು) ಅವಧಿಗೆ ಸೀಮಿತಿಗೊಳಿಸಿ ವರದಿ ಸಲ್ಲಿಸಿ ನನ್ನ ಅನರ್ಹತೆಗೆ ಶಿಫಾರಸು ಮಾಡಿರುವ ಕ್ರಮ ಖಂಡನೀಯವಾಗಿದೆ. ಮೂರು ವರ್ಷದ ನಡೆಸಿದರೆ ಯಾರ ಅವಧಿಯಲ್ಲಿ ಹಗರಣವಾಗಿದೆ ಎಂಬುದು ಗೊತ್ತಾಗಲಿದೆ ಎಂದು ಉಮ್ಮವ್ವ ತಿಳಿಸಿದರು.
ಮೌನೇಶ ಅವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಮಕ್ಕಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು. ಮುಖಂಡರಾದ ಕನಕಪ್ಪ ಗುಡಿಹಾಳ, ಶರಣಪ್ಪ ತುಗ್ಗಲಿ, ಮಾನಸಿಂಗ್, ಮಲ್ಲೇಶ, ದುರುಗಪ್ಪ ಕಟ್ಟಿಮನಿ, ವೆಂಕಟೇಶ, ಶಂಕ್ರಪ್ಪ, ಫೂಲೇಪ್ಪ ಇತರರಿದ್ದರು.