35 ಸಾವಿರ ಹುದ್ದೆ ಭರ್ತಿಗೆ ಸರ್ಕಾರದ ಅನುಮೋದನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

2
Published on

ಮೈಸೂರು: ನಿರುದ್ಯೋಗ ನಿವಾರಣೆಗೆ ನಮ್ಮ ಸರ್ಕಾರ ಕ್ರಮಕೈಗೊಂಡಿದೆ. 28 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, 35 ಸಾವಿರ ಹುದ್ದೆಗಳಿಗೆ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆಯಿಂದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದೇ ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ. ನಮ್ಮ ಸರ್ಕಾರ ಬಂದ ನಂತರ 28 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 35 ಸಾವಿರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಇರುವುದು 7 ಲಕ್ಷ ಸರ್ಕಾರಿ ಹುದ್ದೆಗಳು ಮಾತ್ರ. ಉಳಿದವರಿಗೆಲ್ಲ ಖಾಸಗಿ ಕಂಪನಿಗಳು, ಹಲವು ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಲು ಉದ್ಯೋಗಮೇಳ ಅವಶ್ಯಕವಾಗಿದೆ ಎಂದರು.

ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗಮೇಳ ಆಯೋಜಿಸಿ ಸ್ಥಳದಲ್ಲೇ ಉದ್ಯೋಗ ಕೊಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅದರಂತೆ ಬೇರೆ, ಬೇರೆ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ನಡೆದು ಈಗ ಮೈಸೂರಿನಲ್ಲಿ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ 40 ಸಾವಿರ ನಿರುದ್ಯೋಗಿಗಳು ನೋಂದಣಿ ಮಾಡಿಕೊಂಡಿದ್ದು, ಕೌಶಲ ಇರುವವರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.

ಕಳೆದ 2 ವರ್ಷಗಳಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳದಲ್ಲಿ 58,892 ಅಭ್ಯರ್ಥಿಗಳು ಭಾಗವಹಿಸಿದ್ದಾರೆ. 11,507 ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ನಡೆದ ವಿವಿಧ ಉದ್ಯೋಗಮೇಳಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಭಾಗವಹಿಸಿದ್ದು, 24,391 ಅಭ್ಯರ್ಥಿಗಳು ವಿವಿಧ ಕಂಪನಿಗಳಿಗೆ ನೇಮಕವಾಗಿದ್ದಾರೆ. ಇದು ನಮ್ಮ ಸರ್ಕಾರದ ಸಾಧನೆ ಎಂದು ಸಿಎಂ ಹೇಳಿದರು.

ಉದ್ಯೋಗ ಇಲ್ಲದೆ ನಿರುದ್ಯೋಗಿಗಳು ಕಷ್ಟಪಡುತ್ತಿದ್ದಾರೆ. ಹಿಂದಿನ ಸರ್ಕಾರದ 5 ವರ್ಷಗಳಲ್ಲಿ ಉದ್ಯೋಗ ನೀಡಲಿಲ್ಲ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಭರವಸೆ ನೀಡಿದ ಪ್ರಧಾನಿ ನರೇಂದ್ರಮೋದಿ 11 ವರ್ಷದಲ್ಲಿ ಈ ಕೆಲಸ ಮಾಡಿಲ್ಲ. ವರ್ಷಕ್ಕೆ 2 ಕೋಟಿ ಎಂದರೂ, ದೇಶದಲ್ಲಿ 20 ಕೋಟಿ ಜನರಿಗೆ ಉದ್ಯೋಗ ದೊರೆಯಬೇಕಿತ್ತು ಎಂದು ಟೀಕಿಸಿದರು.

ಉತ್ತಮವಾದ ಭವಿಷ್ಯ ಕಟ್ಟಿಕೊಡಬೇಕು

ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಮಾತನಾಡಿ, ಯುವಕರಿಗೆ ಒಂದು ಉತ್ತಮವಾದ ಭವಿಷ್ಯವನ್ನು ಕಟ್ಟಿಕೊಡಬೇಕು. ಅವರಿಗೆ ಉದ್ಯೋಗಾವಕಾಶ ನೀಡಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಯುವನಿಧಿ, ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗುತ್ತಿದೆ ಎಂದು ಹೇಳಿದರು.

ನಿರುದ್ಯೋಗ ಎಂಬುದು ನಮ್ಮ ದೇಶದ ಒಂದು ದೊಡ್ಡ ಸಮಸ್ಯೆಯಾಗಿದ್ದು, ನಿರುದ್ಯೋಗ ಸಮಸ್ಯೆಯನ್ನು ತೊಡೆದು ಹಾಕುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬ ಉದ್ಯೋಗಕಾಂಕ್ಷಿ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಹಲವು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸಂಘಟಿಸಿ ಉದ್ಯೋಗ ಮೇಳ ನಡೆಸಲಾಗುತ್ತಿದೆ ಎಂದರು.

ಉದ್ಯೋಗಮೇಳದಲ್ಲಿ ಸ್ಥಳದಲ್ಲೇ ನೇಮಕಗೊಂಡ ಹಲವು ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕಾತಿ ಪತ್ರ ವಿತರಿಸಿ ಶುಭಕೋರಿದರು. ಸಂಕಲ್ಪ ಟೂಲ್ ಕಿಟ್‌ನಲ್ಲಿ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್, ಶಾಸಕರಾದ ತನ್ವೀರ್‌ಸೇಠ್, ಡಿ.ರವಿಶಂಕರ್, ವಿಧಾನ ಪರಿಷತ್‌ನ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಕೆ.ಶಿವಕುಮಾರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರನಾಥ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ಕುಮಾರ್, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸೀಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net