ಪಿಆರ್‌ಆರ್ ಆಸುಪಾಸು 6 ಬಡಾವಣೆಗಳ ನಿರ್ಮಾಣಕ್ಕೆ ಸರ್ಕಾರದ ಒಪ್ಪಿಗೆ

prr blueprint
Published on

ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರವನ್ನು ‘ಗ್ರೇಟರ್ ಬೆಂಗಳೂರು’ ಹೆಸರಿನಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದರ ಭಾಗವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊಸ ಬಡಾವಣೆಗಳನ್ನು ರಚಿಸಿ ಸಾರ್ವಜನಿಕರಿಗೆ ಸೈಟ್ ಹಂಚಿಕೆ ಮಾಡಲು ನಿರ್ಧರಿಸಿದೆ.

ನಗರ ಬೆಳೆದಂತೆಲ್ಲ ವಸತಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ನಿವೇಶನಗಳಿಗೆ ಬೇಡಿಕೆ ಹೆಚ್ಚಿದೆ. ಇದಕ್ಕೆ ಅನುಗುಣವಾಗಿ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸೈಟ್‌ಗಳ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಿಲ್ಲ. ಹೀಗಾಗಿ ಜನರು ಖಾಸಗಿ ಲೇಔಟ್‌ನತ್ತ ಮುಖ ಮಾಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಫ್ಲ್ಯಾಟ್‌ಗಳು ಲಭ್ಯವಾಗುತ್ತಿದ್ದರೂ, ನಿವೇಶನಗಳನ್ನು ರಚಿಸಲು ಜಾಗದ ಅಭಾವ ಎದುರಾಗಿದೆ. ಈ ಸಮಸ್ಯೆಯನ್ನು ಅರಿತು ಬಿಡಿಎ, ಹೊರವಲಯದಲ್ಲಿ ಹೊಸದಾಗಿ ಆರು ಲೇಔಟ್‌ಗಳನ್ನು ರಚಿಸಲು ಸರ್ಕಾರದಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಒಪ್ಪಿಗೆ ದೊರೆತಿದ್ದು, ಮುಂದಿನ ಪ್ರಕ್ರಿಯೆ ಇನ್ನಷ್ಟೇ ಕೈಗೊಳ್ಳಬೇಕಿದೆ.

ಪ್ರಸ್ತುತ ಸರ್ಕಾರ ಒಪ್ಪಿಗೆ ನೀಡಿರುವಂತೆ ಬಿಡಿಎ ನಗರದ ದಕ್ಷಿಣ ಭಾಗದಲ್ಲಿ ಬಡಾವಣೆಗಳನ್ನು ನಿರ್ಮಿಸಲು ಜಾಗದ ಹುಡುಕಾಟ ನಡೆಸಿದೆ. ಒಂದು ಲೇಔಟ್ ಹೊರತುಪಡಿಸಿ ಉಳಿದ ಬಡಾವಣೆಗಳು ಕಡಿಮೆ ವಿಸ್ತೀರ್ಣ ಹೊಂದಿರುವಂತೆ ನಿರ್ಮಾಣವಾಗಲಿದೆ. ಕಗ್ಗಲೀಪುರ ಬಳಿ 7 ಹಳ್ಳಿಗಳಿಗೆ ಸೇರಿದ 4,206 ಎಕರೆ ವಿಸ್ತೀರ್ಣದಲ್ಲಿ ದೊಡ್ಡ ಪ್ರಮಾಣದ ಬಡಾವಣೆ ರಚನೆಯಾಗುವ ಸಾಧ್ಯತೆ ಇದೆ. ಉಳಿದ ಐದೂ ಲೇಔಟ್‌ಗಳು ಕಡಿಮೆ ವಿಸ್ತೀರ್ಣ ಹೊಂದಿರಲಿದ್ದು, ನಿರ್ದಿಷ್ಟ ಕಾಲಮಿತಿಯೊಳಗೆ ನಿರ್ಮಿಸುವ ಉದ್ದೇಶವನ್ನು ಬಿಡಿಎ ಹೊಂದಿದೆ.

50 ಸಾವಿರ ಸೈಟ್‌ಗಳ ಹಂಚಿಕೆಗೆ ಗುರಿ:

ಉದ್ದೇಶಿತ ಆರು ಬಡಾವಣೆಗಳಿಂದ ಅಂದಾಜು 50 ಸಾವಿರ ಸೈಟ್‌ಗಳನ್ನು ರಚಿಸುವ ಆಲೋಚನೆ ನಡೆದಿದೆ. ಇದರಲ್ಲಿ ಮುಕ್ಕಾಲು ಭಾಗ ಸಾರ್ವಜನಿಕರಿಗೆ ಹಂಚಿಕೆಯಾಗಲಿದ್ದು, ಉಳಿದವು ಪ್ರಾಧಿಕಾರ ತನ್ನ ನಿಯಮದಂತೆ ಹಂಚಿಕೆ ಮೂಲಕ ವಿಲೇವಾರಿ ಮಾಡಲಿದೆ. ಈ ಸಂಬಂಧ ಶೀಘ್ರದಲ್ಲೇ ಪ್ರಾಧಿಕಾರವು ತನ್ನ ಮಂಡಳಿ ಸಭೆಯಲ್ಲಿ ಚರ್ಚಿಸಿ ಅಧಿಕೃತವಾಗಿ ಬಡಾವಣೆ ರಚನೆ, ಭೂಸ್ವಾಧೀನ ಇತ್ಯಾದಿ ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಿದೆ. ಆ ಬಳಿಕ ಸರ್ಕಾರಕ್ಕೆ ರವಾನಿಸಿ ಅನುಮೋದನೆ ಪಡೆದ ಬಳಿಕ ಜಮೀನು ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಿರಲು ಅಧಿಸೂಚನೆ ಹೊರಡಿಸಿ ಪೂರ್ಣ ಜಮೀನನ್ನು ಬಳಸಿಕೊಂಡು ಲೇಔಟ್ ರಚಿಸಲಿರುವುದರಿಂದ ನಿಖರ ಭೂ ಬಳಕೆ ಆಧರಿಸಿ ಭೂಸ್ವಾಧೀನ ಮಾಡಿಕೊಳ್ಳಲು ತೀರ್ಮಾನಿಸಲಾಗುತ್ತದೆ.

ಪಿಆರ್‌ಆರ್ ಸುತ್ತಮುತ್ತ ರಿಯಾಲ್ಟಿ ಬೂಮ್:

ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಅನ್ನು ನಿರ್ಮಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಬಿಡಿಎ ಈ ಯೋಜನೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ಮುಂದಾಗಿದೆ. ಈಗಾಗಲೇ ಜಾಗ ಗುರುತು ಮಾಡಿರುವುದರಿಂದ ಭೂಮಾಲೀಕರಿಗೆ ಪರಿಹಾರ ನೀಡಿ ಜಮೀನು ಸ್ವಾಧೀನ ಮಾಡಿಕೊಳ್ಳುವುದು ಬಾಕಿ ಇದೆ. ಸದ್ಯ ಪಿಆರ್‌ಆರ್ ಸುತ್ತಮುತ್ತಲಿನ ಪ್ರದೇಶದಲ್ಲಿ ರಿಯಾಲ್ಟಿ ಬೂಮ್ ಪಡೆದಿದೆ. ಕೆಲ ವಸತಿ ಹಾಗೂ ವಸತಿಯೇತರ ನಿರ್ಮಾಣ ಯೋಜನೆಗಳು ಗರಿಗೆದರಿವೆ.

ಬಿಡಿಎ ನಿರ್ಮಿಸಲಿರುವ ಉದ್ದೇಶಿತ ಲೇಔಟ್‌ಗಳ ವಿವರ:

ಬಡಾವಣೆ ಸಂಖ್ಯೆ ವಿಸ್ತೀರ್ಣ ಗ್ರಾಮಗಳು

ಲೇಔಟ್-1 84 ಎಕರೆ ಮಾರಗೊಂಡನಹಳ್ಳಿ

ಲೇಔಟ್-2 516 ಎಕರೆ ಹುಲಿಮಂಗಲ, ಎಸ್.ಬಿಂಗೀಪುರ, ಬೆಟ್ಟದಾಸದಪುರ

ಲೇಔಟ್-3 216 ಎಕರೆ ಹುಲ್ಲಹಳ್ಳಿ

ಲೇಔಟ್-4 510 ಎಕರೆ ಬೇಗೂರು, ಕಮ್ಮನಹಳ್ಳಿ, ಮೈಲಸಂದ್ರ, ಹೊಮ್ಮದೇವನಹಳ್ಳಿ, ಎಲ್ಲೇನಹಳ್ಳಿ, ಹುಲ್ಲಳ್ಳಿ.

ಲೇಔಟ್-5 4206 ಎಕರೆ ಕಗ್ಗಲೀಪುರ, ಬಿ.ಎಂ.ಕಾವಲ್, ಅಗರ, ಯು.ಎಂ.ಕಾವಲ್, ಉತ್ತರಿ, ಗುಳಕಮಲೆ, ಒ.ಬಿ.ಚೂಡನಹಳ್ಳಿ

ಲೇಔಟ್-6 652 ಎಕರೆ ದೇವಗೆರೆ, ಬಿ.ಎಂ.ಕಾವಲ್, ಗುಡಿಮಾವು, ಗಂಗಸಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net