ಸರ್ಕಾರಿ ಆಂಬ್ಯುಲೆನ್ಸ್ ಸೇವೆ ಉಚಿತ: ಯೋಜನೆಗೆ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ

Government ambulance service is free Mandya
Published on

ಮಂಡ್ಯ: ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಜಾರಿಗೆ ತಂದಿರುವ ಸರ್ಕಾರದ ಆಂಬ್ಯುಲೆನ್ಸ್‌ನ ಉಚಿತ ಸೇವೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಅಂತೆಯೇ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಂಡ ಯೋಜನೆ ಇದಾಗಿದೆ.

ಹಿಂದೆ ಸರ್ಕಾರಿ ಆಂಬ್ಯುಲೆನ್ಸ್‌ನಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗಲು ಸಂಬಂಧಪಟ್ಟವರು ಡೀಸೆಲ್‌ಗೆಂದು ಹಣ ಕೊಡಬೇಕಿತ್ತು. ಆದರೀಗ ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ಕೇಂದ್ರ ಅಥವಾ ಬೆಂಗಳೂರು, ಮೈಸೂರು ಜಿಲ್ಲೆಗೆ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗಲು ಹಣ ನೀಡಬೇಕಿಲ್ಲ. ಬದಲಿಗೆ ಇಲಾಖೆಯಿಂದಲೇ ಭರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಮಾರ್ಗದರ್ಶನದ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಕಾರ್ಯಕ್ರಮ ರೂಪಿಸಿದ್ದಾರೆ.

ಇದಕ್ಕೆಂದು ಇಲಾಖೆಗೆ ಸಂಬಂಧಿಸಿದ ಜಿಲ್ಲಾ ಪಂಚಾಯಿತಿಯಿಂದ ನೀಡಲಾಗುತ್ತಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಆಂಬ್ಯುಲೆನ್ಸ್‌ಗೆ ಡೀಸೆಲ್ ಸೇರಿದಂತೆ ನಿರ್ವಹಣೆ ಮಾಡಲು ಪ್ರತಿ ವರ್ಷ 1.25 ಕೋಟಿ ರೂ ಅನುದಾನ ಮೀಸಲಿಡಲಾಗುತ್ತದೆ. ಹದಿನೈದು ವರ್ಷ ಪೂರೈಸಿದ ಆಂಬ್ಯುಲೆನ್ಸ್ ನಿರ್ವಹಣೆಗೆ ಹೆಚ್ಚಿನ ಖರ್ಚು ಮಾಡಬೇಕಿತ್ತು. ಆದರೀಗ ಆ ವಾಹನಗಳಿಲ್ಲ. ಈ ಹಿನ್ನೆಲೆಯಲ್ಲಿ ಈ ಮೊತ್ತವನ್ನು ಹೊಸ ಯೋಜನೆಗೆ ಬಳಸಲಾಗುತ್ತಿದೆ.

ಸೋಮವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಾರ್ವಜನಿಕರು ಸರ್ಕಾರಿ ಆಂಬ್ಯುಲೆನ್ಸ್ ಬಳಕೆ ಮಾಡಿಕೊಳ್ಳಲು ಹಣ ನೀಡಬೇಕಿತ್ತು. ಆದರೀಗ ಆ ಹಣವನ್ನು ಇಲಾಖೆಯಿಂದಲೇ ನೀಡಲಾಗುತ್ತಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ಜನೋಪಯೋಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ ಎಂದರು.

ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net