

ಮಂಡ್ಯ: ಮುಗುಳುನಗೆಯ ಸಿಂಚನ, ಆಶಾಕಿರಣ, ಹೃದಯ ವೈಶಾಲ್ಯದಂತಹ ಜನೋಪಯೋಗಿ ಕಾರ್ಯಕ್ರಮ ಜಾರಿಗೊಳಿಸಿ ಯಶಸ್ವಿಯಾಗಿರುವ ಜಿಲ್ಲಾ ಆರೋಗ್ಯ ಇಲಾಖೆ, ಇದೀಗ ಮತ್ತೊಂದು ಮಹತ್ವದ ಯೋಜನೆ ಅನುಷ್ಠಾನಕ್ಕೆ ಸಿದ್ಧವಾಗಿದೆ. ಸರ್ಕಾರದ ಆಂಬ್ಯುಲೆನ್ಸ್ ಬಳಕೆ ಮಾಡಿಕೊಳ್ಳಲು ಸಾರ್ವಜನಿಕರು ಡೀಸೆಲ್‌ಗೆಂದು ಇಂತಿಷ್ಟು ಎಂದು ಪಾವತಿಸುತ್ತಿದ್ದ ಹಣವನ್ನು ಆರೋಗ್ಯ ಇಲಾಖೆಯಿಂದಲೇ ನೀಡಲು ಮುಂದಾಗಿದೆ. ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ಕೇಂದ್ರ ಅಥವಾ ಬೇರೆ ಜಿಲ್ಲೆಯ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗಲು ಸಂಬಂಧಪಟ್ಟವರು ಡೀಸೆಲ್‌ಗೆಂದು ಹಣ ಕೊಡಬೇಕಿತ್ತು. ಈ ಮೊತ್ತವನ್ನು ಆರೋಗ್ಯ ರಕ್ಷಾ ಸಮಿತಿ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಮಾರ್ಗದರ್ಶನದ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಕಾರ್ಯಕ್ರಮ ರೂಪಿಸಿದ್ದಾರೆ. ಅದರಂತೆ ಜನರು ಡೀಸೆಲ್‌ಗೆಂದು ನೀಡಲಾಗುತ್ತಿದ್ದ ಮೊತ್ತವನ್ನು ಇಲಾಖೆಯಿಂದಲೇ ಭರಿಸಲಾಗುತ್ತಿದೆ. ಏನಿದು ಯೋಜನೆ?: ಸಾರ್ವಜನಿಕರ ಅನುಕೂಲಕ್ಕೆಂದು ಸರ್ಕಾರ ಆಂಬ್ಯುಲೆನ್ಸ್ ಸೇವೆ ಒದಗಿಸಿದೆ. ಜಿವಿಕೆ ಸಂಸ್ಥೆ ಸಹಯೋಗದಲ್ಲಿ ನಿರ್ವಹಣೆ ಮಾಡಲಾಗುತ್ತಿದ್ದ 108 ಆಂಬ್ಯುಲೆನ್ಸ್‌ನ ಉಚಿತ ಸೇವೆಗೆ ಸರ್ಕಾರದಿಂದ ಹಣ ಪಾವತಿಸಲಾಗುತ್ತಿದೆ. ಅದೇ ರೀತಿ ಇಲಾಖೆಗೆ ಸೇರಿದ ಆಂಬ್ಯುಲೆನ್ಸ್ ಬಳಕೆ ಮಾಡಿಕೊಳ್ಳಬೇಕಾದರೆ ಪ್ರತಿ ಕಿ.ಮೀಗೆ 5 ರೂ ನಿಗದಿಪಡಿಸಲಾಗಿತ್ತು. ತಾಲೂಕಿನಿಂದ ಜಿಲ್ಲಾ ಕೇಂದ್ರ ಅಥವಾ ಬೇರೆ ಜಿಲ್ಲೆಯಲ್ಲಿನ ಆಸ್ಪತ್ರೆಗೆ ಹೋಗಬೇಕಾದರೆ ಇಂತಿಷ್ಟೆಂದು ಹಣ ನೀಡಬೇಕಿತ್ತು. ಈ ಹೊರೆಯನ್ನು ಇಳಿಸಲು ಹಾಗೂ ಉಚಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಇನ್ನು ಇದಕ್ಕೆಂದು ಇಲಾಖೆಗೆ ಸಂಬಂಧಿಸಿದ ಜಿಲ್ಲಾ ಪಂಚಾಯಿತಿಯಿಂದ ನೀಡಲಾಗುತ್ತಿದ್ದ ಅನುದಾನವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಸರ್ಕಾರದ ಆಂಬ್ಯುಲೆನ್ಸ್‌ಗೆ ಡೀಸೆಲ್ ಸೇರಿದಂತೆ ನಿರ್ವಹಣೆ ಮಾಡಲು ಪ್ರತಿ ವರ್ಷ 1.25 ಕೋಟಿ ರೂ ಅನುದಾನ ಮೀಸಲಿಡಲಾಗುತ್ತದೆ. ಹಿಂದೆಲ್ಲ ಹದಿನೈದು ವರ್ಷ ಪೂರೈಸಿದ ಆಂಬ್ಯುಲೆನ್ಸ್ ನಿರ್ವಹಣೆಗೆ ಹೆಚ್ಚಿನ ಖರ್ಚು ಮಾಡಬೇಕಿತ್ತು. ಆದರೀಗ ಆ ವಾಹನಗಳಿಲ್ಲ. ಈ ಹಿನ್ನೆಲೆಯಲ್ಲಿ ಈ ಮೊತ್ತವನ್ನು ಹೊಸ ಯೋಜನೆಗೆ ಬಳಸಲಾಗುತ್ತಿದೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರ್ಕಾರಿ ಆಂಬ್ಯುಲೆನ್ಸ್ ಬಳಕೆ ಮಾಡಿಕೊಳ್ಳಲು ನೀಡಬೇಕಿದ್ದ ಹಣವೂ ದುಬಾರಿಯಾಗಿತ್ತು. ಅದರಲ್ಲಿಯೂ ಕೆ.ಆರ್.ಪೇಟೆ, ನಾಗಮಂಗಲ ತಾಲೂಕಿನಿಂದ ಮಂಡ್ಯ ಅಥವಾ ಮೈಸೂರಿಗೆ ಹೋಗಬೇಕಾದರೆ ಪ್ರಯಾಣ ದರ ಹೆಚ್ಚಾಗುತ್ತಿತ್ತು. ಆದರೀಗ ಆ ಸಮಸ್ಯೆ ಇಲ್ಲದಾಗಿದ್ದು, ಒಟ್ಟಾರೆ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನವಾದರೆ ಆರೋಗ್ಯ ಇಲಾಖೆಯಿಂದ ಬಡ ಜನರಿಗೆ ನೆರವಾದಂತಾಗಲಿದೆ. ರಾಜ್ಯದಲ್ಲೇ ಮೊದಲ ಪ್ರಯೋಗ: ಹಲವು ಹೊಸ ಕಾರ್ಯಕ್ರಮ ಜಾರಿಗೊಳಿಸಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಹೊಂದಿರುವ ಜಿಲ್ಲಾ ಆರೋಗ್ಯ ಇಲಾಖೆ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಯೋಗಕ್ಕೆ ಮುಂದಾಗಿದೆ. ಇದಕ್ಕಾಗಿ ಹಣವನ್ನು ಮೀಸಲಿಟ್ಟುಕೊಂಡಿದೆ. ಅದರಂತೆ ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದಿಂದ ಬಳಕೆಯಾಗುವ ಆಂಬ್ಯುಲೆನ್ಸ್‌ಗೆ ಉಚಿತ ಸೇವೆ ಒದಗಿಸಲಾಗುತ್ತಿದೆ. 108 ಆಂಬ್ಯುಲೆನ್ಸ್ ಸೇವೆ ಮಾತ್ರ ಉಚಿತವಾಗಿತ್ತು. ಆದರೀಗ ಜಿಲ್ಲೆಯಲ್ಲಿ ಸರ್ಕಾರಿ ಆಂಬ್ಯುಲೆನ್ಸ್ ಸೇವೆಯೂ ಉಚಿತವಾಗಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಸರ್ಕಾರದ ಆಂಬ್ಯುಲೆನ್ಸ್ ಬಳಕೆ ಮಾಡಿಕೊಳ್ಳಲು ನಿಗದಿಪಡಿಸಲಾಗಿದ್ದ ಹಣವನ್ನು ಸಾರ್ವಜನಿಕರು ಪಾವತಿಬೇಕಿತ್ತು. ಇದು ಆರೋಗ್ಯ ರಕ್ಷಾ ಸಮಿತಿ ಖಾತೆಗೆ ಜಮೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣದ ದರವನ್ನು ಇಲಾಖೆಯಿಂದಲೇ ಭರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು. ಡಾ.ಕೆ.ಮೋಹನ್ ಜಿಲ್ಲಾ ಆರೋಗ್ಯಾಧಿಕಾರಿ