ಮುಖ್ಯವಾಹಿನಿಗೆ ಬುಡಕಟ್ಟು ಜನಾಂಗ ತರಲು ಸರ್ಕಾರ ಕ್ರಮ: ಸಚಿವ ಎ.ನಾರಾಯಣಸ್ವಾಮಿ

9
Published on

ಮೈಸೂರು: ಆದಿವಾಸಿ, ಬುಡಕಟ್ಟು ಜನಾಂಗವನ್ನು ಮುಖ್ಯವಾಹಿನಿಗೆ ತರುವಲ್ಲಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ 3939 ಲಕ್ಷ ಬುಡಕಟ್ಟು ಜನರಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿರುವ ಕೆಲ ಕಾನೂನು ತೊಡಕುಗಳನ್ನು ಬದಿಗೊತ್ತಿ, ಆ ಸಮಾಜಕ್ಕೆ ನಾಗರಿಕತೆಯನ್ನು ಪರಿಚಯ ಮಾಡಿಕೊಡುವ ಮೋದಿ ಅವರ ಪರಿಕಲ್ಪನೆ ಮೆಚ್ಚುವಂತದ್ದು ಎಂದು ಬಣ್ಣಿಸಿದರು.
ಹಾಡಿಗಳಲ್ಲಿ ವಾಸಿಸುವವರನ್ನು ಗುರುತಿಸಿ ಅವರಿಗೆ ಪಡಿತರ ಕಾರ್ಡ್, ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್, 4.50 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಾಣ, ವಾಸಿಸುವ ಜಾಗಕ್ಕೆ ರಸ್ತೆ, ಕುಡಿಯುವ ನೀರು, ಶಾಲೆ, ಅಂಗನವಾಡಿ, ಆಸ್ಪತ್ರೆಯಂತಹ ಮೂಲಸೌಲಭ್ಯವನ್ನು ಒದಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂದರು.
ಇಡೀ ದೇಶದಲ್ಲಿ 401 ಏಕಲವ್ಯ ವಸತಿಶಾಲೆಗಳನ್ನು ನಿರ್ಮಾಣ ಮಾಡಿ 38 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇದರಿಂದ 3 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಕಾಡಂಚಿನ ಜನರಿಗೂ ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಮೊಬೈಲ್, ಇಂಟರ್‌ನೆಟ್ ದೊರೆಯಬೇಕು. ಜೇನುಕುರುಬ ಮತ್ತು ಕೊರಗ ಜನಾಂಗದ ಅಭಿವದ್ಧಿಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಸರ್ಕಾರದ ಸೌಲಭ್ಯಗಳ ಬಗ್ಗೆ ಜನರಿಗೆ ತಿಳಿಸಿಕೊಡಬೇಕು. ತಮ್ಮ ಹಕ್ಕು, ಬಾಧ್ಯತೆಗಳ ಕುರಿತು ಹಾಡಿ ಜನರು ಪ್ರಶ್ನೆ ಮಾಡಿದರೆ ಅವುಗಳಿಗೆ ಸೂಕ್ತ ಉತ್ತರ ನೀಡಿ ಅವರ ಅನುಮಾನ ಬಗೆಹರಿಸಬೇಕು. ಯಾರೊಬ್ಬರೂ ಸರ್ಕಾರದ ಸೌಲಭ್ಯ, ಅವರ ಮೂಲಭೂತ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ನಾಗರಿಕತೆಯಿಂದ ದೂರ ಉಳಿದಿರುವ ಬುಡಕಟ್ಟು ಜನಾಂಗಕ್ಕೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಕಾಡಂಚಿನಲ್ಲಿರುವ ಜನರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಕುರಿತು ಅಧಿಕಾರಿಗಳಿಗೆ ಮೊದಲ ಅರಿವು ಇರಬೇಕು ಎಂದು ಹೇಳಿದರು.
ಆದಿವಾಸಿಗಳು ಸಹ ತಮ್ಮ ಹಕ್ಕುಗಳ ಕುರಿತು ಕೇಳಿ ತಿಳಿದುಕೊಂಡು ತಮಗೆ ಸಿಗಬೇಕಾದ ಸೌಲಭ್ಯ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಮನೆ ನಿರ್ಮಿಸಲು 1.5 ಲಕ್ಷ ರೂ. ಕೊಡುತ್ತಾರೆ. ಆದರೆ ಕೇಂದ್ರ ಸರ್ಕಾರ ಬುಡಕಟ್ಟು ಜನಾಂಗಕ್ಕೆ 4.50 ಲಕ್ಷ ರೂ. ನೀಡುವುದರಿಂದ ಇದರ ಸದುಪಯೋಗಪಡೆದುಕೊಳ್ಳಬೇಕು. ಈ ಮೂಲಕ ಮನೆ ನಿರ್ಮಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬುಡಕಟ್ಟು ಜನರಿಗೆ ಸರ್ಕಾರದ ವಿವಿಧ ಯೋಜನೆ ಅಡಿ ಸವಲತ್ತು ವಿತರಿಸಲಾಯಿತು. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಲ್.ಶ್ರೀನಿವಾಸ್, ಉಪನಿರ್ದೇಶಕಿ ಬಿ.ಎಸ್.ಪ್ರಭಾ ಅರಸ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ರಾಜ್‌ಕುಮಾರ್, ಜಿಲ್ಲಾ ಅಧಿಕಾರಿ ಎನ್.ಮುನಿರಾಜು, ಸಂಶೋಧನಾಧಿಕಾರಿ ಎಚ್.ಎಸ್.ಬಿಂದ್ಯಾ, ಕೇಂದ್ರ ಸರ್ಕಾರದ ನೋಡಲ್ ಅಧಿಕಾರಿ ದಿಲೀಫ್ ಸಾಹೋ, ಟ್ರೈಪೆಡೆನ್ ಪ್ರಾದೇಶಿಕ ವ್ಯವಸ್ಥಾಪಕ ಸುಬ್‌ಜೀತ, ತಾಲೂಕು ಅಧಿಕಾರಿಗಳಾದ ಮಹೇಶ್, ಬಸವರಾಜು, ನಾರಾಯಣಸ್ವಾಮಿ, ಅರುಣ್ ಪ್ರಭು, ಚಂದ್ರಶೇಖರ್, ಡಾ.ಮೋಹನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net