

| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಗ್ರಾಮ ಪಂಚಾಯಿತಿಗಳಲ್ಲಿನ ಖರ್ಚು-ವೆಚ್ಚಗಳಲ್ಲಿ ಪಾರದರ್ಶಕತೆ, ಲೆಕ್ಕ ಪರಿಶೋಧನೆಯಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಸರ್ಕಾರವು ‘ಆನ್ಲೈನ್ ಆಡಿಟ್’ ಮಾಡಲು ನಿರ್ಧರಿಸಿದೆ.
ರಾಜ್ಯದಲ್ಲಿನ 6,028 ಗ್ರಾಪಂಗಳಿಗೆ ವಾರ್ಷಿಕ ತಲಾ 50 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಅನುದಾನ ಬರುತ್ತದೆ. ಆದರೆ, ಎಷ್ಟು ಪ್ರಮಾಣದಲ್ಲಿ ಅನುದಾನ ಖರ್ಚಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು ‘ಆನ್ಲೈನ್ ಆಡಿಟ್’ ವ್ಯವಸ್ಥೆ ಅಳವಡಿಸಿಕೊಂಡಿದೆ.
ವೆಬ್ ಆಧಾರಿತ ತಂತ್ರಾಂಶ
ಬಹುತೇಕ ಗ್ರಾಪಂಗಳಲ್ಲಿ ವಾರ್ಷಿಕ ಲೆಕ್ಕ ಪರಿಶೋಧನೆಗಳು ವಿಳಂಬವಾಗುತ್ತಿವೆ. ಕೆಲವು ಕಡೆ ಲೆಕ್ಕ ಪರಿಶೋಧನೆಗಳ ವರದಿಯಲ್ಲಿ ಲೋಪ-ದೋಷಗಳೂ ಕಂಡು ಬರುತ್ತಿವೆ. ಇದರಿಂದಾಗಿ ನಿಗದಿತ ಸಮಯದಲ್ಲಿ ಲೆಕ್ಕ ಪರಿಶೋಧನೆ ಮಾಡುವುದು ಹಾಗೂ ಪಾರದರ್ಶಕತೆ ಕಾಪಾಡುವುದು ತೊಡಕಾಗುತ್ತಿವೆ. ಈ ಹಿನ್ನೆಲೆಯಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು ವೆಬ್ ಆಧಾರಿತ ‘ಆಡಿಟ್ ಆನ್ಲೈನ್’ ತಂತ್ರಾಂಶ ಅಭಿವೃದ್ಧಿ ಪಡಿಸಿದೆ.
ಮೊದಲ ಹಂತ ಆರಂಭ
ಆನ್ಲೈನ್ ತಂತ್ರಾಂಶದ ಮೂಲಕವೇ ಎಲ್ಲ ಗ್ರಾಪಂಗಳು ಲೆಕ್ಕ ಪರಿಶೋಧನೆ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 30 ಜಿಪಂಗಳ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಶೇ. 20ರಂತೆ ಸುಮಾರು 1,230 ಗ್ರಾಪಂ ಗುರುತಿಸಲಾಗಿದ್ದು, 2019-20ನೇ ಸಾಲಿನ ಅನುದಾನ ಬಳಕೆ, ಖರ್ಚು-ವೆಚ್ಚಗಳ ಸಂಪೂರ್ಣ ಲೆಕ್ಕ ಪರಿಶೋಧನೆಯನ್ನು ಆನ್ಲೈನ್ ಮೂಲಕವೇ ಆಡಿಟ್ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಕ್ರಮ ವಹಿಸಿದೆ.
ನೋಂದಣಿ ಮಾಡಲು ಸಿಬ್ಬಂದಿಗೆ ತರಬೇತಿ
ಆನ್ಲೈನ್ ಆಡಿಟ್ ಕಾರ್ಯಕ್ರಮ ಸುಗವಾಗಿ ನಡೆಸುವ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆ. ಅಲ್ಲದೆ, ಆನ್ಲೈನ್ ಆಡಿಟ್ಗೆ ಆಯ್ಕೆಯಾಗಿರುವ ಗ್ರಾಪಂಗಳ ಪಿಡಿಒಗಳು ತಮ್ಮ ಗ್ರಾಪಂಗಳ ವಾರ್ಷಿಕ ಖರ್ಚು, ವೆಚ್ಚಗಳನ್ನು ಆನ್ಲೈನ್ ಆಡಿಟ್ ತಂತ್ರಾಂಶದಲ್ಲಿ ನೋಂದಣಿ ಮಾಡಬೇಕು. ಇದಕ್ಕಾಗಿ ಸಂಬಂಧಿಸಿದ ಗ್ರಾಪಂ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಹಣಕಾಸು ಇಲಾಖೆಯು ಸ್ಥಳೀಯ ಸಂಸ್ಥೆಯ ಲೆಕ್ಕ ಪರಿಶೋಧನೆಯನ್ನು ಆನ್ಲೈನ್ ಮೂಲಕವೇ ಆಡಿಟ್ ಮಾಡುವಂತೆ ಆದೇಶಿಸಿದೆ. ಹೀಗಾಗಿ ಮೊದಲ ಹಂತದಲ್ಲಿ ಕೆಲ ಗ್ರಾಪಂ ಆಯ್ಕೆ ಮಾಡಿಕೊಳ್ಳಲಾಗಿದ್ದು, ಆ ಪೈಕಿ ನವೆಂಬರ್ನಲ್ಲಿ 594 ಗ್ರಾಪಂಗಳ ಲೆಕ್ಕ ಪರಿಶೋಧನೆ ಮಾಡಲಾಗುತ್ತಿದೆ.| ಮಂಜುನಾಥ ಹೆಗಡೆ, ಆನ್ಲೈನ್ ಆಡಿಟ್ ರಾಜ್ಯ ನೋಡಲ್ ಅಧಿಕಾರಿ