ದೋಷರಹಿತ ‘ಹೆಸ್ಕಾಂ’ಗೆ ಸರ್ಕಾರದ ಕ್ರಮ, ಸೈಯ್ಯದ್ ಅಜೀಮ್‌ಪೀರ ಎಸ್.ಖಾದ್ರಿ

AJAMPEER KHADRI
ಸೈಯ್ಯದ್ ಅಜೀಮ್‌ಪೀರ ಎಸ್.ಖಾದ್ರಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ
Published on

ವಿಜಯಪುರ: ದೋಷ ರಹಿತ ಹಾಗೂ ಅಪಘಾತ ರಹಿತ ಹೆಸ್ಕಾಂ ಆಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಇಂಧನ ಸಚಿವರ ಮಾರ್ಗದರ್ಶನದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿರುವುದಾಗಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ, ಮಾಜಿ ಶಾಸಕ ಸೈಯ್ಯದ್ ಅಜೀಮ್‌ಪೀರ ಎಸ್.ಖಾದ್ರಿ ಹೇಳಿದರು.

ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಹೆಸ್ಕಾಂ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಹೇಳಿದರು.

ಕಳೆದ 2023ನೇ ಸಾಲಿನವರೆಗೆ 10 ಸಾವಿರ ರೂ. ತುಂಬಿ ಆರ್.ಆರ್.ನಂಬರ್ ಪಡೆದ 15200 ರೈತರ ಪಂಪ್‌ಸೆಟ್‌ಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದ್ದು, 50 ರೂ. ತುಂಬಿ ಆರ್.ಆರ್.ನಂಬರ್ ಪಡೆದ 23 ಸಾವಿರ ರೈತರಿಗೆ ಐಪಿ ಸೆಟ್ ಕಲ್ಪಿಸುವ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ರೈತರ ಬೇಡಿಕೆಯಂತೆ ಗ್ರಾಮೀಣ ಭಾಗದಲ್ಲಿ ಹಗಲು 7 ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಕಾರ್ಯಕ್ಕೆ ಈಗಾಗಲೇ ರಾಜ್ಯದ ದೊಡ್ಡಬಳ್ಳಾಪುರ ಹಾಗೂ ಗದಗ ಜಿಲ್ಲೆಯ ಮೂಸಿಗೆರಿಯಲ್ಲಿ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಸೋಲಾರದಿಂದ ಉತ್ಪಾದಿಸಲಾದ ವಿದ್ಯುತ್ ಪಡೆದುಕೊಂಡು ಹಗಲು ವೇಳೆಯಲ್ಲಿ 7 ಗಂಟೆ ವಿದ್ಯುತ್ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ಭೂಗರ್ಭ ಕೇಬಲ್ ಅಳವಡಿಕೆಗೆ ಮಂಜೂರಾತಿ

ವಿಜಯಪುರ ನಗರದಲ್ಲಿ ಭೂಗರ್ಭ (ಅಂಡರ್‌ಗ್ರೌಂಡ್ ಕೇಬಲ್ ಅಳವಡಿಕೆ) ಕೇಬಲ್ ಅಳವಡಿಕೆಗೆ ಇಂಧನ ಇಲಾಖೆಯಿಂದ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಕಳೆದ 20 ರಿಂದ 30 ವರ್ಷ ಹಳೆಯದಾದ ಅಪಾಯಕಾರಿಯಾದ ವಿದ್ಯುತ್ ಕಂಬಗಳಿಂದ ಯಾವುದೇ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಲು ಈಗಾಗಲೇ ಇಂತಹ ಪೋಲ್ಸ್‌ಗಳನ್ನು ಗುರುತಿಸಿ ತೆರವುಗೊಳಿಸಿ ಬದಲಿ ಕಂಬಗಳ ಅವಳಡಿಕೆ ಹಾಗೂ ಅಪಾಯಕಾರಿಯಾದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿದ್ದಲ್ಲಿ ಇದನ್ನು ಶಿಫ್ಟ್ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದಲ್ಲಿ ತಕ್ಷಣವೇ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸಿ ಅಗತ್ಯ ಕ್ರಮ ವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸ್ಮಾರ್ಟ್ ಮೀಟರ್ ಅಳವಡಿಕೆಗೆ ಚೆಸ್ಕಾಂ ಹಾಗೂ ಬೆೆಸ್ಕಾಂನಲ್ಲಿ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಭಾಗದಲ್ಲಿ ಸ್ಮಾರ್ಟ್ ಮಿಟರ್ ಅಳವಡಿಸುವ ಪ್ರಸ್ತಾವನೆ ಇದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುವುದು. ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ 350 ಲೈನ್‌ಮನ್ ನೇಮಕಾತಿ ಪ್ರಕ್ರಿಯೆಯಲ್ಲಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. ಮೆರಿಟ್ ಹಾಗೂ ಕೌನ್ಸೆಲಿಂಗ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿ, ನೇಮಕಾತಿಯಾದವರಿಗೆ ಅಗತ್ಯವಿರುವ ಕಡೆ ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ಧಪ್ಪ ಬಿಂಜಗೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net