

ಸಿದ್ದಾಪುರ: ನೆಲ್ಯಹುದಿಕೇರಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ಸ್ವಾಗತ ಕೋರಲಾಯಿತು
ಬಳಿಕ ಶಾದಿಮಹಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಂಶುಪಾಲ ಎಚ್.ನೌಶಾದ್, ಯಾವುದೇ ದೇಶ ಸಂವಿಧಾನವಿಲ್ಲದೆ ಆಡಳಿತ ನಡೆಸಲು ಸಾಧ್ಯವಿಲ್ಲ. ಸ್ವತಂತ್ರ ಪೂರ್ವ ಭಾರತದಲ್ಲಿ ಬ್ರಿಟಿಷರು ತಮ್ಮದೇ ಆದ ಸಂವಿಧಾನ ರಚಿಸಿ ಆಳ್ವಿಕೆ ಮಾಡುತ್ತಿದ್ದರು. ಪ್ರಾಚೀನ ಭಾರತದಲ್ಲಿ ಮಹಿಳೆಯರು ಶಿಕ್ಷಣ ಪಡೆಯಲು ಅವಕಾಶ ಇರಲಿಲ್ಲ. ಆದರೆ ನಮ್ಮ ಸಂವಿಧಾನ ಅದಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದೆ. ಪ್ರತಿಯೊಬ್ಬರಿಗೂ ಸಮಾನ ಹಕ್ಕನ್ನು ಕಲ್ಪಿಸುವ ಸುಂದರ ಸಂವಿಧಾನ ಭಾರತಕ್ಕಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಸೋಮಣ್ಣ ಮಾತನಾಡಿ, ಸಂವಿಧಾನಕ್ಕೆ ಅಪಾಯ ಎದುರಾಗಿದ್ದು, ಅದನ್ನು ಉಳಿಸುವ ಜವಾಬ್ದಾರಿ ಜನರ ಮೇಲಿದೆ. ಬೇರೆ ಬೇರೆ ದೇಶದ ಸಂವಿಧಾನಗಳನ್ನು ಅಂಬೇಡ್ಕರ್ ಅವರು ಸಮಗ್ರವಾಗಿ ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಸಂವಿಧಾನ ನೀಡಿದ್ದಾರೆ. ಅದನ್ನು ಇಲ್ಲಿನ ಕೆಲವು ರಾಜಕಾರಣಿಗಳು ಹಾಗೂ ದೇಶದ್ರೋಹಿಗಳು ಒಪ್ಪುತ್ತಿಲ್ಲ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂವಿಧಾನ ಉಳಿವಿಗಾಗಿ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಸಂವಿಧಾನ ಮಹತ್ವ ಅರಿತು ಅದರ ಉಳಿವಿಗೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ನ್ಯಾಯಾಧೀಶ ಎ.ಎ. ಶಫೀರ್ ಕಾನೂನಿನ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ನೆಲ್ಯಹುದಿಕೇರಿ ಗ್ರಾಪಂ ಅಧ್ಯಕ್ಷೆ ಧಮಯಂತಿ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಕುಶಾಲನಗರ ತಾಲೂಕು ಸಹಾಯಕ ನಿರ್ದೇಶಕ ಸಿದ್ದೇಗೌಡ, ಗ್ರಾಪಂ ಪಿಡಿಒ ನಂಜುಂಡ ಸ್ವಾಮಿ ಇತರರಿದ್ದರು.