

ಮನೋಹರ ಬಳಂಜ ಬೆಳ್ತಂಗಡಿ
ಗ್ರಾಮೀಣ ಪ್ರದೇಶದ ಹತ್ತಾರು ಹಳ್ಳಿಗಳ ಜನರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಸರ್ಕಾರ ಸ್ಥಳೀಯವಾಗಿ ಆರೋಗ್ಯ ಕೇಂದ್ರಗಳನ್ನು ನಿರ್ಮಿಸುತ್ತಿದ್ದು ಅನುದಾನ ಬಿಡುಗಡೆ ಮಾಡದಿರುವುದರಿಂದ ಕೆಲವು ಅಧರ್ಕ್ಕೆ ನಿಂತು ಸೇವೆಗೆ ಅಲಭ್ಯವಾಗಿವೆ.
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಸುಣ್ಣದಗೂಡಿನ ಬಳಿ 1.30 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಯೋಜನೆ(ಕೆ.ಎಚ್.ಎಸ್.ಡಿ.ಸಿ)ಯಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಗೊಂಡು ವರ್ಷ ಕಳೆದಿದೆ.
ಸರ್ವೇ ನಂಬರ್ 174 /1ಸಿ 1ಎ ಎಂ 0.88 ಎಕರೆ ಜಾಗದಲ್ಲಿ 2,500 ಚದರಡಿಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಟೆಂಡರ್ ಕರೆದು ಕೆಲಸ ಆರಂಭಿಸಲಾಗಿತ್ತು. ಸಣ್ಣಪುಟ್ಟ ಕೆಲಸಗಳನ್ನು ಹೊರತುಪಡಿಸಿ ಕಟ್ಟಡ ಪೂರ್ಣಗೊಂಡಿದೆ. ಆದರೆ ಕಾರ್ಯಾರಂಭ ಇನ್ನೂ ಆಗಿಲ್ಲ. ಗುತ್ತಿಗೆದಾರರು ಇನ್ನೂ ಇಲಾಖೆಗೆ ಹಸ್ತಾಂತರಿಸದಿರುವುದರಿಂದ ಉದ್ಘಾಟನೆಗೊಂಡಿಲ್ಲ.
ಸುಸಜ್ಜಿತ ಕಟ್ಟಡ: ಆರು ಹಾಸಿಗೆಯುಳ್ಳ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ಕೊಠಡಿಗಳು, ವಿದ್ಯುತ್ ಸಂಪರ್ಕ ಪೂರ್ಣಗೊಂಡಿದೆ. ಕಟ್ಟಡದ ಒಳಭಾಗದಲ್ಲಿ ಕಚೇರಿ, ಸಭಾಂಗಣ, ವೈದ್ಯರ ಕೊಠಡಿ, ಸ್ಟೋರ್ ರೂಮ್, ಲ್ಯಾಬ್, ಡ್ರೆಸ್ಸಿಂಗ್, ಪರೀಕ್ಷಾ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ, ಔಷಧ ವಿತರಿಸಲು ಪ್ರತ್ಯೇಕ ಕೊಠಡಿ ಎಲ್ಲವನ್ನೂ ಮೀಸಲಿರಿಸಲಾಗಿದೆ.
ಮೂರು ಗ್ರಾಮಗಳಿಗೆ ಪ್ರಯೋಜನ: ತಾಲೂಕಿನ ನೆರಿಯ ಆರೋಗ್ಯ ಕೇಂದ್ರಕ್ಕೊಳಪಟ್ಟಂತೆ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಕಕ್ಕಿಂಜೆಯಲ್ಲಿ ಗ್ರಾಪಂ ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚಿಬಿದ್ರೆ, ತೋಟತ್ತಾಡಿ ಹಾಗೂ ಚಾರ್ಮಾಡಿ ಈ ಮೂರು ಗ್ರಾಮಗಳ ವ್ಯಾಪ್ತಿಗೊಳಪಡುತ್ತಿದೆ. ಚಾರ್ಮಾಡಿ ಗ್ರಾಮ, ನೆರಿಯ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಪ್ರದೇಶದಲ್ಲಿ ತುರ್ತು ಅವಘಡ ಸಂಭವಿಸಿದಲ್ಲಿ ಉಜಿರೆ ಅಥವಾ ಬೆಳ್ತಂಗಡಿ ಆಸ್ಪತ್ರೆಗಳಿಗೆ ಬರಲು 30 ಕಿ.ಮೀ. ಓಡಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ನೂತನ ಕಟ್ಟಡ ಶೀಘ್ರ ಕಾಮಗಾರಿ ಪೂರ್ಣಗೊಂಡಲ್ಲಿ ಬಹಳಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಜನ.
ಹಳೇ ಕೇಂದ್ರಕ್ಕೆ ವೈದ್ಯಾಧಿಕಾರಿ ಅವಶ್ಯ: ಕಳೆದ ಜನಗಣತಿಯಂತೆ ಈ ಮೂರು ಗ್ರಾಮಗಳಲ್ಲಿ 11,194 ಜನಸಂಖ್ಯೆ ಇದೆ. ಈಗಿರುವ ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಅಗತ್ಯ ವ್ಯವಸ್ಥೆಗಳಿಲ್ಲ. ವೈದ್ಯಾಧಿಕಾರಿ ಅಥವಾ ಆರೋಗ್ಯ ಸಹಾಕಿಯರಿಲ್ಲ. ಸದ್ಯ ನೆರಿಯ ಸಂಚಾರಿ ಗಿರಿಜನ ಆರೋಗ್ಯ ಘಟಕದ ಕಿರಿಯ ಆರೋಗ್ಯ ಸಹಾಯಕಿಯನ್ನು ಔಷಧ ನೀಡುವ ನಿಟ್ಟಿನಲ್ಲಿ ನಿಯೋಜಿಸಲಾಗಿದೆ. ಸೂಕ್ತ ವ್ಯವಸ್ಥೆ ಇಲ್ಲದ ಗ್ರಾಮಸ್ಥರು ಮುಂಡಾಜೆ, ನೆರಿಯ ಮೊದಲಾದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸುವ ಸ್ಥಿತಿ ಎದುರಾಗಿದೆ.
ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರ: ಕೊಕ್ಕಡದಲ್ಲೂ ನಾಲ್ಕು ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆಯುಳ್ಳ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ ಕೊನೆಯ ಹಂತದಲ್ಲಿದೆ. ಶಿಶಿಲ, ಶಿಬಾಜೆ, ನಿಡ್ಲೆ, ನೆಲ್ಯಾಡಿ, ಅರಸಿನಮಕ್ಕಿ ಸುತ್ತಮುತ್ತ ನಾಲ್ಕಾರು ಗ್ರಾಮದ ಜನರಿಗೆ ಅತೀ ಹೆಚ್ಚು ಪ್ರಯೋಜನವಾಗಲಿದೆ. ಇದರ ಲೋಕಾರ್ಪಣೆಯೂ ವಿಳಂಬವಾಗಿದೆ.
ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಹುತೇಕ ಪೂರ್ಣಗೊಂಡಿದೆ. ಆದರೆ ಇಲಾಖೆಗೆ ಹಸ್ತಾಂತರಿಸದಿರುವುದರಿಂದ ಉದ್ಘಾಟನೆ ಸಾಧ್ಯವಾಗಿಲ್ಲ. ಕೊಕ್ಕಡ ಸಮುದಾಯ ಆಸ್ಪತ್ರೆ ಡಿಸೆಂಬರ್ ಅವಧಿಯಲ್ಲಿ ಇಲಾಖೆಗೆ ಹಸ್ತಾಂತರಗೊಳ್ಳುವ ಸಾಧ್ಯತೆ ಇದೆ. ಬಳಿಕ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಡಾ.ಕಲಾಮಧು ತಾಲೂಕು ಆರೋಗ್ಯಾಧಿಕಾರಿ