

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ಸುಪ್ರಸಿದ್ಧ ಸುಕ್ಷೇತ್ರ ಮಾಡಾಳು ಗ್ರಾಮದಲ್ಲಿ ಗೌರಮ್ಮ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನಡೆಯಿತು.
ಪವಿತ್ರ ಸಂದರ್ಭಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಗೌರಮ್ಮ ಪ್ರತಿಷ್ಠಾಪನೆಗೂ ಮುನ್ನ ಮಾಡಾಳು ಗೌರಮ್ಮ ಮೂರ್ತಿ ಹಾಗೂ ಚನ್ನಬಸವೇಶ್ವರ ಸ್ವಾಮಿಯನ್ನು ಮೆರವಣಿಗೆ ಮೂಲಕ ಮೂಲಸ್ಥಾನಕ್ಕೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಸುರಿದ ಮಳೆ ಭಕ್ತರ ಉತ್ಸಾಹಕ್ಕೆ ಮತ್ತಷ್ಟು ಉತ್ತೇಜನ ನೀಡಿದ್ದು, ಇದನ್ನು ಗೌರಮ್ಮನ ಕೃಪೆಯೆಂದು ಭಕ್ತರು ಕೊಂಡಾಡಿದರು.
ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು ಮಾಡಾಳು ಗೌರಮ್ಮನಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಬಳಿಕ ವಜ್ರದ ಮೂಗುತಿ ಹಾಗೂ ನಾನಾ ವಜ್ರ, ಮುತ್ತುಗಳಿಂದ ಅಲಂಕರಿಸಲಾಯಿತು.
ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗಲಿ. ಈ ಬಾರಿಯೂ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಗೌರಮ್ಮನ ಆಶೀರ್ವಾದದಿಂದ ರೈತರಿಗೆ ಉತ್ತಮ ಬೆಳೆ ಲಭಿಸಲೆಂದು ಶ್ರೀಗಳು ಆಶಿಸಿದರಲ್ಲದೆ, 12 ದಿನಗಳ ನಂತರ ಭಕ್ತರ ಸಮ್ಮುಖದಲ್ಲಿ ಗೌರಮ್ಮ ಮೂರ್ತಿ ವಿಸರ್ಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಗೌರಮ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ನಟರಾಜ್, ಗೌರವಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಮುಖಂಡರಾದ ಎಂ.ಸಿ.ನಟರಾಜ್, ಎಂ.ಎಸ್.ಮರಳೇಗೌಡ, ಅಶೋಕ್, ಮಾಡಾಳು ಶಿವಲಿಂಗಪ್ಪ, ಎಂ.ಜಿ.ಶಿವಣ್ಣ, ಕೋಡಿಮಠದ ಏಜೆಂಟ್ ಮಹದೇವಪ್ಪ, ಹಾರನಹಳ್ಳಿ ನೇತ್ರೇಶ್, ಸೋಮಶೇಖರ್, ಕೊಡ್ಲಿ ಬಸವರಾಜು ಚಂದ್ರಪ್ಪ, ದಾಸಪ್ಪ, ತಿಮ್ಮಯ್ಯ ಇತರರಿದ್ದರು.