

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ನೀಡುವ ರಂಗಚಂದ್ರ ಗೌರವ ಪ್ರಶಸ್ತಿಗೆ ಹಾನಗಲ್ ತಾಲೂಕಿನ ಕಲಕೇರಿ ಗ್ರಾಮದ ಕಲಾವಿದ ಫಕ್ಕೀರಪ್ಪ ಗೌರಕ್ಕನವರ ಮತ್ತು ಹುಬ್ಬಳ್ಳಿ ತಾಲೂಕಿನ ಯುವ ಕಲಾವಿದ ಬಸವರಾಜ ಚಕ್ರಸಾಲಿ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನವು 18 ವರ್ಷಗಳಿಂದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಪುರಸ್ಕಾರವು ಪ್ರಶಸ್ತಿ ಫಲಕ, ಪ್ರಮಾಣಪತ್ರ ಒಳಗೊಂಡಿದೆ ಎಂದರು.
ಫಕ್ಕೀರಪ್ಪ ಗೌರಕ್ಕನವರ ಚಿಕ್ಕ ವಯಸ್ಸಿನಲ್ಲೇ ದೊಡ್ಡಾಟ, ಸಣ್ಣಾಟಗಳಲ್ಲಿ ಪಾತ್ರ ಮಾಡಲು ಆರಂಭಿಸಿದವರು. ಅನೇಕ ಪ್ರದರ್ಶನಗಳಲ್ಲಿ ಮುಖ್ಯ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರ ಸೇವೆಗೆ ಕರ್ನಾಟಕ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿದೆ. ಇನ್ನು ಬಸವರಾಜ ಚಕ್ರಸಾಲಿ ಹುಬ್ಬಳ್ಳಿಯಲ್ಲಿ 17 ವರ್ಷಗಳಿಂದ ರಂಗ ಚಟುವಟಿಕೆ ಮೂಲಕ ಅನೇಕ ಯುವ ಕಲಾವಿದರಿಗೆ ಅವಕಾಶ ಕಲ್ಪಿಸಿದ್ದಾರೆ. ಪೌರಾಣಿಕ, ಐತಿಹಾಸಿಕ,ಸಾಮಾಜಿಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ, ಕೃಷ್ಣಮೂರ್ತಿ ಗೊಲ್ಲರ, ಇತರರು ಇದ್ದರು.