

ಬ್ಯಾಡಗಿ: ಗೌಂಡಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿ ಆತನ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿ ಇಲ್ಲಿಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಸವಂತಪುರ ತಾಲೂಕಿನ ಸುರುನಾಯ್ಕ ತಾಂಡಾದ ಆಕಾಶ ದೇವದಾಸ ಪವಾರ (29) ಮೃತ ವ್ಯಕ್ತಿ.
ಈತ ಇಲ್ಲಿಯ ರಾಜಕುಮಾರ ಎಂಬ ಗುತ್ತಿಗೆದಾರನ ಬಳಿ 6 ತಿಂಗಳಿಂದ ಕೆಲಸ ಮಾಡಿಕೊಂಡಿದ್ದ. ಆದರೆ, ರಾಜಕುಮಾರ ಫೋನ್ ಮಾಡಿ ನಿಮ್ಮ ಮಗ ಕೆಲಸದ ಮೇಲೆ ಮೃತಪಟ್ಟಿದ್ದಾನೆ ಎಂದು ತಿಳಿಸಿದಾಗ ಬಂದು ನೋಡಿದರೆ ಆತನ ತಲೆ ಹಿಂದೆ ರಕ್ತ ಬಿದ್ದಿದೆ. ರಕ್ತಸ್ರಾವ ಮತ್ತು ತಲೆ ಒಡೆದಿದೆ. ಆದ್ದರಿಂದ ಆತನ ಸಾವಿನಲ್ಲಿ ಅನುಮಾನವಿದ್ದು ಈ ಕುರಿತು ತನಿಖೆ ನಡೆಸಬೇಕು ಎಂದು ಮೃತನ ಕುಟುಂಬದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.