

ಆನಂದ ಭಮ್ಮನ್ನವರ ಚಿಕ್ಕೋಡಿ
ರಸ್ತೆಯ ತುಂಬ ಗುಂಡಿಗಳು, ಆಮೆಗತಿಯಲ್ಲಿ ಸಂಚರಿಸುವ ವಾಹನಗಳು, ಮುಖಗವಸು ಧರಸಿಕೊಂಡು ಓಡಾಡುವ ಬೈಕ್ ಸವಾರರು. ಇದು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಜಿಲ್ಲೆಯ ಗೋಟೂರ&ಮುರಗುಂಡಿ ರಾಷ್ಟ್ರೀಯ ಹೆದ್ದಾರಿ 548ಬಿ ರಸ್ತೆಯ ದುಸ್ಥಿತಿ.
ಸುಗಮ ಸಂಚಾರಕ್ಕೆ ಅನುಕೂಲವಾಗಲೆಂದು 2018ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗೋಟೂರದಿಂದ ವಿಜಯಪುರವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸಲು ಮಂಜೂರಾತಿ ದೊರೆತಿತ್ತು. 2020ರಲ್ಲಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ ಕೈಗೆತ್ತಿಕೊಳ್ಳಲಾಗಿದೆ.
ಇದರಲ್ಲಿ ವಿಜಯಪುರದಿಂದ ಮುರಗುಂಡಿವರೆಗೆ ಮಾತ್ರ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದು, ಮುರಗುಂಡಿಯಿಂದ ಗೋಟೂರವರೆಗಿನ ಕಾಮಗಾರಿಗೆ ಭೂಸ್ವಾಧಿನ, ತಾಂತ್ರಿಕ ತೊಂದರೆಯಿಂದ ನನೆಗುದಿಗೆ ಬಿದ್ದಿದೆ. ಪರಿಣಾಮ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರ ಅಯೋಮಯವಾಗಿದೆ.
ಗುಂಡಿಮಯ ರಸ್ತೆ: ಗೋಟೂರದಿಂದ ಚಿಕ್ಕೋಡಿವರೆಗಿನ ರಸ್ತೆಯ ಉದ್ದಕ್ಕೂ ಗುಂಡಿಗಳಿದ್ದು, ಸಂಪೂರ್ಣ ಹಾಳಾಗಿದೆ. 24 ಕಿ.ಮೀ. ಕ್ರಮಿಸಲು 1 ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿದೆ. ರಾತ್ರಿ ವೇಳೆ ವಾಹನ ಸಂಚಾರ ಇನ್ನೂ ಕಷ್ಟಕರವಾಗಿದೆ. ಕಬ್ಬು ಹಂಗಾಮು ಆರಂಭವಾಗುತ್ತಿದ್ದು, ಭಾರಿ ತೂಕದ ಟ್ರಾಕ್ಟರ್, ಟ್ರಕ್ ಓಡಾಟದಿಂದ ರಸ್ತೆಯ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಗುಂಡಿ ಮುಚ್ಚಲು ಒತ್ತಾಯ: ಗೋಟೂರದಿಂದ ನಿಡಸೋಸಿವರೆಗಿನ ಹಾಳಾದ ರಸ್ತೆಯಲ್ಲಿ ಬೈಕ್ ಸವಾರರ ಅಪಘಾತ ಸಾಮಾನ್ಯವಾಗುತ್ತಿದೆ. ಗುಂಡಿ ಮುಚ್ಚುವ ಕಾರ್ಯಕ್ಕೆ ಮಳೆಗಾಲದ ನೆಪ ಹೇಳುವುದನ್ನು ಬಿಟ್ಟು ಆದಷ್ಟು ಬೇಗ ಗುಂಡಿ ಮುಚ್ಚುವಂತೆ ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ.
ರಸ್ತೆ ಗುಂಡಿ ಮುಚ್ಚಲು ಅಂದಾಜು ವೆಚ್ಚದ ವರದಿಯನ್ನು ಇಲಾಖೆಗೆ ಕಳುಹಿಸಲಾಗಿದೆ. ಅಂದಾಜು ಪ್ರತಿ 1 ಕಿಮೀ ರಸ್ತೆಗೆ 2 ಲಕ್ಷ ರೂ. ನಿಗದಿಯಂತೆ ಗುಂಡಿ ಮುಚ್ಚಲು ವರದಿ ಸಲ್ಲಿಸಲಾಗಿದೆ. ಇಲಾಖೆಯಿಂದ ಅನುಮೋದನೆ ದೊರೆತ ಕೂಡಲೇ ಗುಂಡಿ ಮುಚ್ಚುವ ಕಾರ್ಯ ಆರಂಭಿಸಲಾಗುವುದು.
> ವಿವೇಕ ಮಠ ಎಇಇ, ಎನ್ಚ್548ಬಿ
ಗೋಟೂರದಿಂದ ಚಿಕ್ಕೋಡಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ಆಮೆಗತಿಯಲ್ಲಿ ಸಾಗಬೇಕಿದೆ. ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಇದರ ಜತೆ ಇರುವ ರಸ್ತೆಯ ಗುಂಡಿ ಮುಚ್ಚಲು ಮೀನ&ಮೇಷ ಎನ್ನಿಸುತ್ತಿದ್ದಾರೆ. ಆದಷ್ಟು ಬೇಗ ಗುಂಡಿ ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಬೇಕು.
> ವಿನಯ ಪಾಟೀಲ ವಾಹನ ಸವಾರ