

ಉಡುಪಿ: ಪ್ರೀತಿ ಮತ್ತು ಕ್ಷಮಾ ಗುಣಗಳಿರುವ ಉತ್ತಮ ನಾಯಕನಾದವನು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಯೇಸು ಸ್ವಾಮಿಯು ತನ್ನ ಜೀವನದಲ್ಲಿ ಕ್ಷಮೆ ಮತ್ತು ಪ್ರೀತಿಯ ಮೂಲಕ ವಿಶ್ವದಲ್ಲಿ ಕ್ರಾಂತಿಕಾರಕ ಬದಲಾವಣೆ ತೋರಿಸಿರುವುದು ಮಾದರಿಯಾಗಿದೆ ಎಂದು ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ ಹೇಳಿದರು.
ಕಲ್ಯಾಣಪುರ ವಲಯದ ಕ್ರೈಸ್ತ ಯುವಸಮುದಾಯದ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಭಾರತೀಯ ಕೆಥೊಲಿಕ್ ಯುವ ಸಂಚಾಲನ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಗೊಸ್ಪೆಲ್ ಗಾಲಾ (ಸುವಾರ್ತೆಯ ಸಂಭ್ರಮ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೇಸು ಸ್ವಾಮಿ ತೋರಿಸಿಕೊಟ್ಟ ಮೌಲ್ಯಗಳೊಂದಿಗೆ ಬದುಕಿದಾಗ ಸಮಾಜದ ಪ್ರತಿಯೊಬ್ಬರಿಗೂ ಮಾದರಿ ನಾಯಕನಾಗಲು ಸಾಧ್ಯವಿದೆ ಎಂದರು.
ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಡೆನಿಸ್ ಡೆಸಾ ಮಾತನಾಡಿ, 2025ನೇ ವರ್ಷವು ಯೇಸು ಸ್ವಾಮಿಯ ಜನ್ಮದ ಜುಬಿಲಿ ಆಚರಣೆಯಿದೆ. ಅದಕ್ಕೆ ಪೂರಕವಾಗಿ ಈ ವರ್ಷವನ್ನು ಪ್ರಾರ್ಥನೆಯ ವರ್ಷವಾಗಿ ಘೋಷಿಸಲಾಗಿದೆ. ಯುವ ಜನರು ಹೇಗೆ ಆಟೋಟ, ಸಾಂಸ್ಕೃತಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೋ ಅದೇ ರೀತಿ ಆಧ್ಯಾತ್ಮಿಕ ವಿಚಾರಗಳಿಗೂ ಆಸಕ್ತಿ ತೋರಬೇಕೆಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ತೊಟ್ಟಂ ಐಸಿವೈಎಂ ಅಧ್ಯಕ್ಷ ಸ್ಯಾಮುವೆಲ್ ಫೆರ್ನಾಂಡಿಸ್ ಸ್ವಾಗತಿಸಿದರು. ಪ್ರಿಯಾಂಕಾ ಮಾರ್ಟಿಸ್ ವಂದಿಸಿದರು
ಕಲ್ಯಾಣಪುರ ವಲಯದ 9 ಚರ್ಚ್ಗಳ 175ಕ್ಕೂ ಅಧಿಕ ಯುವಜನರು ಪಾಲ್ಗೊಂಡಿದ್ದು, ಅವರ ಪರಿಚಯವನ್ನು ವಿಶಿಷ್ಟವಾಗಿ ಮಾಡಲಾಯಿತು. ಬಳಿಕ ಅವರೊಂದಿಗೆ ಆಧ್ಯಾತ್ಮಿಕ ಸಂವಾದ ಮತ್ತು ಸಂಭಾಷಣೆ, ಬೈಬಲ್ ಕ್ವಿಜ್, ಬೈಬಲ್ ರೀಲ್ಸ್ ಸ್ಪರ್ಧೆ, ಕೊಲಾಜ್ ಮಾಡುವುದು ಹಾಗೂ ಆಧ್ಯಾತ್ಮಿಕ ಗಾಯನ ಕಾರ್ಯಕ್ರಮ ನಡೆದವು. ತೊಟ್ಟಂ ಸಂತ ಅನ್ನಮ್ಮ ಕಾನ್ವೆಂಟ್ನ ಮುಖ್ಯಸ್ಥೆ ಸಿಸ್ಟರ್ ಸುಷ್ಮಾ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ ಅಧ್ಯಕ್ಷ ಗೊಡ್ವಿನ್ ಮಸ್ಕರೇನ್ಹಸ್, ವಲಯ ಅಧ್ಯಕ್ಷರಾದ ಲೊಯ್ಡ್ ಕರ್ನೆಲಿಯೊ, ತೊಟ್ಟಂ ಚರ್ಚ್ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ಐಸಿವೈಎಂ ಸಚೇತಕರಾದ ಲೆಸ್ಲಿ ಆರೋಝಾ, ಆಲಿಸ್ ಮಿನೇಜಸ್ ಉಪಸ್ಥಿತರಿದ್ದರು.