ಹುಬ್ಬಳ್ಳಿ: ತಾಲೂಕಿನ ಬಂಡಿವಾಡದಲ್ಲಿ ಪಂಚವಟಿ ಗೋಶಾಲೆ ಉದ್ಘಾಟನೆ ಹಾಗೂ ಸಾವಯವ ಕೃಷಿ ದೀಕ್ಷಾ ಸಮಾರಂಭ ಮಾ. 5ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ ಎಂದು ಸೀತಾಗಿರಿ- ಅಣ್ಣಿಗೇರಿ, ಬಂಡಿವಾಡದ ಡಾ. ಎ.ಸಿ. ವಾಲಿ ಮಹಾರಾಜರು ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಶಿವಾನಂದ ಬೃಹನ್ಮಠದ ಶ್ರೀ ಸದಾಶಿವಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೌರಿಗದ್ದೆ ದತ್ತಾಶ್ರಮದ ಶ್ರೀ ವಿನಯ ಗುರೂಜಿ ಗೋಶಾಲೆ ಉದ್ಘಾಟಿಸುವರು. ಶಿಗ್ಗಾಂವಿ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮೀಜಿ ಸಮ್ಮುಖ ವಹಿಸುವರು ಎಂದರು.
ಸಚಿವ ಶಂಕರಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸುವರು. ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕರಾದ ಕುಸುಮಾವತಿ ಶಿವಳ್ಳಿ, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ ಇತರರು ಪಾಲ್ಗೊಳ್ಳುವರು ಎಂದರು.

ಸಾವಯವ ಕೃಷಿ:

ಬಂಡಿವಾಡ ಹಾಗೂ ಸುತ್ತಲಿನ ಸುಮಾರು 2 ಸಾವಿರ ರೈತರಿಗೆ ಸಾವಯವ ಕೃಷಿ ದೀಕ್ಷೆ ನೀಡಲಾಗುತ್ತದೆ. ಡಾ. ಎ.ಸಿ. ವಾಲಿ ಮಹಾರಾಜರು ಸಾನ್ನಿಧ್ಯ ವಹಿಸುವರು. ಅಣ್ಣಿಗೇರಿಯ ಈಶ್ವರಪ್ಪ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸುವರು. ಪಾರಂಪರಿಕ ವೈದ್ಯ ಡಾ. ಹನುಮಂತ ಮಳಲಿ ಗೋ ಆಧಾರಿತ ಕೃಷಿ, ವರದಶ್ರೀ ಫೌಂಡೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಸಾವಯವ ಕೃಷಿ ಮಹತ್ವ ಕುರಿತು ಮಾರ್ಗದರ್ಶನ ನೀಡುವರು.

ದೇಶಿ ತಳಿ ದಾನ:

ಕನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಸಲಹೆ ಮೇರೆಗೆ ಗೋಶಾಲೆ ಆರಂಭಿಸಲಾಗಿದೆ. ಈಗಾಗಲೇ 200 ಆಕಳು, 100 ಕರುಗಳು ಇವೆ. ದೇಶಿ ಆಕಳು ತಳಿ ಉಳಿಸುವ ಉದ್ದೇಶದಿಂದ ಇದನ್ನು ಪ್ರಾರಂಭ ಮಾಡಲಾಗಿದೆ. ಪ್ರತಿ ವರ್ಷ 10 ದೇಶಿ ಆಕಳನ್ನು ತಳ ವರ್ಗದವರಿಗೆ ಸಾಕಲು ದಾನವಾಗಿ ನೀಡಲಾಗುವುದು. ಇದರೊಂದಿಗೆ ಬೀದಿಬದಿ ಹಾಗೂ ಅನಾಥ, ಅನಾರೋಗ್ಯಕ್ಕೆ ತುತ್ತಾದ ಗೋವುಗಳನ್ನು ತಂದು ಸಾಕುತ್ತೇವೆ. ಗೋಶಾಲೆ ನಡೆಸಲು ಅಗತ್ಯ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಾ. ವಾಲಿ ಮಹಾರಾಜರು ಹೇಳಿದರು. ರಘು ಮೆಹರವಾಡೆ, ಗುರು ಬನ್ನಿಕೊಪ್ಪ, ಬಸವರಾಜ ಎಸ್. ಇತರರು ಇದ್ದರು.