ಸುಳ್ಯದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಗೋಶಾಲೆ: ಅರುಣ್ ಕುಮಾರ್ ಶೆಟ್ಟಿ ಮಾಹಿತಿ

Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಸುಳ್ಯದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಗೋಶಾಲೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.

ದ.ಕ. ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಮುಂದುವರಿದ ಕೆಡಿಪಿ ಸಭೆಯಲ್ಲಿ ಅನಾಥ ಗೋವುಗಳ ಪಾಲನೆಗೆ ಸುಳ್ಯದಲ್ಲಿ ಶೀಘ್ರ ಗೋಶಾಲೆ ಆರಂಭಿಸುವಂತೆ ಶಾಸಕಿ ಭಾಗೀರಥಿ ಮುರುಳ್ಯ ಆಗ್ರಹಿಸಿದ್ದರು.

ತ್ಯಾಜ್ಯ ನೀರು ಸಂಸ್ಕರಣಾ ಘಟಕ:

ಕಲ್ಲಡ್ಕದಂತಹ ಪಟ್ಟಣಗಳ ಒಳಚರಂಡಿ ನೀರನ್ನು ರಸ್ತೆ ಬದಿಗೆ ಬಿಡುವ ಬದಲಿಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ತೆರೆಯಬೇಕು. ಕೊಳಚೆ ನೀರನ್ನು ಸಂಸ್ಕರಿಸಿ ಆಯಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಬದಿ, ಖಾಲಿ ಜಾಗಗಳಲ್ಲಿ ನೆಡುವ ಗಿಡಗಳಿಗೆ ಬಳಸಬೇಕು ಎಂದು ಶಾಸಕ ರಾಜೇಶ್ ನಾಕ್ ಸಲಹೆ ನೀಡಿದರು. ಇದೊಂದು ಅಪೂರ್ವ ಸಲಹೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿಗೆ ಸೂಚಿಸಿದರು.

ತೋಟ ಜಲಾವೃತ, ಪರಿಹಾರಕ್ಕೆ ಆಗ್ರಹ

ಬಂಟ್ವಾಳ ಜಕ್ರಿಬೆಟ್ಟುವಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿದ ಕಿಂಡಿ ಅಣೆಕಟ್ಟೆಯಲ್ಲಿ ನೀರು ನಿಲ್ಲಿಸಿದ ಕಾರಣ ಸಮೀಪದ ಅಡಕೆ ತೋಟಗಳಿಗೆ ನೀರು ನುಗ್ಗಿ ಹಾನಿಯಾಗಿದೆ. 5.5 ಮೀ. ಎತ್ತರಕ್ಕೆ ನೀರು ನಿಲ್ಲಿಸಬಹುದಾಗಿದ್ದು, 5 ಮೀ. ನೀರು ನಿಲ್ಲಿಸಿದಾಗಲೇ ಅಡಕೆ ತೋಟ ಜಲಾವೃತಗೊಂಡಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಶಾಸಕ ರಾಜೇಶ್ ನಾಕ್ ಆಗ್ರಹಿಸಿದರು. ಈ ಬಗ್ಗೆ ಶಾಸಕರಿಗೆ ಸಮರ್ಪಕ ಮಾಹಿತಿ ಒದಗಿಸಬೇಕು. ಈ ಪ್ರಕರಣದಲ್ಲಿ ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲಾಗದು. ಸಮಸ್ಯೆಗೆ ಕಾರಣರಾದವರೇ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net