‘ಗೊರುಚ’ ದತ್ತಿನಿಧಿ ಪ್ರಶಸ್ತಿ ಪ್ರದಾನ

GORUCHA
Published on

ಧಾರವಾಡ: ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಲ್ವರು ಸಾಹಿತಿಗಳಿಗೆ 2022ನೇ ಸಾಲಿನ ‘ಗೊರುಚ’ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಮಾತನಾಡಿ, ಶರಣ ಮತ್ತು ಜಾನಪದ ಸಾಹಿತ್ಯವನ್ನು ಉಳಿಸಿ- ಬೆಳೆಸುವ ಕಾರ್ಯ ಮಾಡುತ್ತಿರುವ ಗೊ.ರು. ಚನ್ನಬಸಪ್ಪ ಅವರ ಕಾರ್ಯ ಶ್ಲಾಘನೀಯ. ಎರಡೂ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಅಭಿನಂದಿಸಿ ಪ್ರಶಸ್ತಿ ನೀಡುತ್ತಿರುವುದು ಪ್ರೇರಣಾದಾಯಕ ಕಾರ್ಯ ಎಂದು ಅಭಿಪ್ರಾಯಪಟ್ಟರು.


ಗೊರುಚ ಅವರು ಪರಿಷತ್‌ಗೆ ಅತ್ಯುತ್ತಮ ಅಡಿಪಾಯ ಹಾಕಿದವರು. ಗೊರುಚ ದತ್ತಿನಿಧಿ ಸ್ಥಾಪಿಸಿ ಅದರ ಅಡಿ ಪ್ರತಿ ವರ್ಷ 4 ಪ್ರಶಸ್ತಿಗಳನ್ನು ಕೊಡಮಾಡುತ್ತಿದ್ದಾರೆ. ಅರ್ಹ ಕೃತಿಕಾರರನ್ನು ಗುರುತಿಸಿ ಬೆಳಕಿಗೆ ತರುತ್ತಿರುವ ಅವರ ಕಾರ್ಯ ಪ್ರಶಂಶನೀಯ ಎಂದರು.


ತುಮಕೂರಿನ ಡಾ. ಬಿ. ನಂಜುಂಡಸ್ವಾಮಿ ಅವರಿಗೆ ‘ಶರಣ’ ಪ್ರಶಸ್ತಿ, ಬೆಂಗಳೂರಿನ ಡಾ. ವಿಜಯಶ್ರೀ ಸಬರದಗೆ ‘ಶರಣ ಸಾಹಿತ್ಯ ಗ್ರಂಥ’ ಪ್ರಶಸ್ತಿ, ಮೈಸೂರಿನ ಡಾ. ಪಿ.ಕೆ. ರಾಜಶೇಖರಗೆ ‘ಜಾನಪದ’ ಪ್ರಶಸ್ತಿ, ಉತ್ತರ ಕನ್ನಡದ ಶಾಂತಿ ನಾಯಕ ಅವರಿಗೆ ‘ಜಾನಪದ ಸಾಹಿತ್ಯ ಗ್ರಂಥ’ ಪ್ರಶಸ್ತಿಯನ್ನು ಗದಗ- ಡಂಬಳ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಪ್ರದಾನ ಮಾಡಿದರು.


ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಡಾ. ಗೊ.ರು. ಚನ್ನಬಸಪ್ಪ, ಪರಿಷತ್ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಗೌರವ ಉಪಸ್ಥಿತರಿದ್ದರು. ಹಿರಿಯ ಸಾಹಿತಿಗಳಾದ ಡಾ. ಸಿ. ವೀರಣ್ಣ, ಡಾ. ವೀರಣ್ಣ ರಾಜೂರ, ಇತರರಿದ್ದರು. ಎ್.ಬಿ. ಕಣವಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net