

ಶ್ರವಣ್ ಕುಮಾರ್ ನಾಳ ಮಂಗಳೂರು
ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್-ಎಕ್ಕೂರು ಹೆದ್ದಾರಿ ನಡುವಿನ ಗೋರಿಗುಡ್ಡ ತೆರವುಗೊಳಿಸಿ ಸಾರ್ವಜನಿಕ ಸಂಪರ್ಕಕ್ಕೆ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ಆದರೂ, ಇಲ್ಲಿನ ಸ್ಥಳೀಯ ನಿವಾಸಿಗಳ ಸಂಚಾರಕ್ಕೆ ರಸ್ತೆ ಇಲ್ಲದಂತಾಗಿದ್ದು, ಸುತ್ತುಬಳಸಿ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ.
ಗೋರಿಗುಡ್ಡ ಬಸ್‌ನಿಲ್ದಾಣವಿದ್ದ ಪ್ರದೇಶದಿಂದ ಇಳಿಜಾರು ಮೂಲಕ ಗುರುಪ್ರಸಾದ್ ಲೇನ್‌ಗೆ ಹೋಗುವ ರಸ್ತೆ ಹಾಗೂ ಗೋರಿಗುಡ್ಡದ ಮೇಲೆ ಹೋಗುವ ಇನ್ನೊಂದು ಒಳರಸ್ತೆಯನ್ನು ಹೆದ್ದಾರಿಯ ಸರ್ವೀಸ್ ರಸ್ತೆಯ ನೆಪದಿಂದ ಬಂದ್ ಮಾಡಲಾಗಿದೆ. ಹೀಗಾಗಿ ಗೋರಿಗುಡ್ಡ ಜನವಸತಿ ಪ್ರದೇಶದ ನೂರಾರು ಮಂದಿಗೆ ಹೆದ್ದಾರಿಗೆ ಬರಲು ಸುತ್ತುಬಳಸಿ ಬರುವಂತಾಗಿದೆ.
ತರಾತುರಿಯ ಕಾಮಗಾರಿ: ಪಂಪ್‌ವೆಲ್-ಎಕ್ಕೂರು ಹೆದ್ದಾರಿ ನಡುವಿನ ಗೋರಿಗುಡ್ಡದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕಳೆದ ಏಪ್ರಿಲ್‌ನಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ಆರಂಭಿಸಲಾಗಿತ್ತು. ಈ ಕಾಮಗಾರಿಯಿಂದ ಸ್ಥಳೀಯರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಹೆದ್ದಾರಿ ಇಲಾಖೆಯವರು ಮೊದಲೇ ತಿಳಿಸಿದ್ದರು. ಆದರೆ, ತರಾತುರಿಯ ರಸ್ತೆ ಕಾಮಗಾರಿಯಿಂದಾಗಿ ಈಗ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ. ಅರ್ಧ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಇಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ. ಗುರುಪ್ರಸಾದ್ ಲೇನ್‌ನಿಂದಾಗಿ ಹೆದ್ದಾರಿ ಸಂಪರ್ಕಿಸುವಲ್ಲಿ ತಡೆಗೋಡೆ ನಿರ್ಮಿಸುವಾಗ ಹಾಕಿದ್ದ ಮಣ್ಣು ಒಂದೇ ಮಳೆಗೆ ಕೊಚ್ಚಿ ಹೋಗಿದೆ. ಕೆಸರಿನಿಂದಾಗಿ ಪಾದಚಾರಿಗಳಿಗೂ ಸಮಸ್ಯೆ ಎದುರಾಗಿದೆ.
ಅಸಮರ್ಪಕ ತಡೆಗೋಡೆ: ಗೋರಿಗುಡ್ಡದಲ್ಲಿ ಸರ್ವಿಸ್ ರಸ್ತೆ ಬದಿಯಲ್ಲಿ ತಡೆಗೋಡೆ ನಿರ್ಮಿಸಿದ್ದು, ಇಲ್ಲಿನ ಮಣ್ಣು ಸಡಿಲವಾದಂತಿದೆ. ಇದರ ಬದಿಯ ಮಣ್ಣು ಕೊಂಚ ಕುಸಿದ ರೀತಿಯಲ್ಲಿ ಭಾಸವಾಗುತ್ತಿದೆ. ಇಲ್ಲಿಯೇ ಸಣ್ಣ ಜಾಗದಲ್ಲಿ ತೇಪೆ ಕಾರ್ಯವನ್ನೂ ಮಾಡಲಾಗಿದೆ. ಹೀಗಾಗಿ ತಡೆಗೋಡೆಯಿಂದಲೇ ಅಪಾಯ ಎದುರಾಗುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸರ್ವಿಸ್ ರಸ್ತೆಗಾಗಿ ಗೋರಿಗುಡ್ಡದ ಸ್ಥಳೀಯರು ಹೆದ್ದಾರಿ ಇಲಾಖೆಗೆ ಸಹಕಾರ ನೀಡಿದ್ದರು. ಆದರೆ, ಈಗ ಸಂಪರ್ಕ ರಸ್ತೆ ಬಂದ್ ಮಾಡಿದ್ದರಿಂದ ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ. ಸ್ಥಳೀಯರಿಗೆ ಸಮಸ್ಯೆ ಆಗದಂತೆ ತಾತ್ಕಾಲಿಕ ರಸ್ತೆ ನಿರ್ಮಿಸುವಂತೆ ಈಗಾಗಲೇ ಹೆದ್ದಾರಿ ಇಲಾಖೆಗೆ ಒತ್ತಾಯಿಸಲಾಗಿದೆ.- ಪ್ರವೀಣ್‌ಚಂದ್ರ ಆಳ್ವ, ಸ್ಥಳೀಯ ಕಾರ್ಪೊರೇಟರ್
ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್-ಎಕ್ಕೂರು ಹೆದ್ದಾರಿ ನಡುವಿನ ಗೋರಿಗುಡ್ಡ ತೆರವುಗೊಳಿಸಿ ಸಾರ್ವಜನಿಕ ಸಂಪರ್ಕಕ್ಕೆ ಸರ್ವೀಸ್ ರಸ್ತೆ ನಿರ್ಮಾಣವಾಗಿದೆ. ಸ್ಥಳೀಯ ನಿವಾಸಿಗಳಿಗೆ ಸಂಚರಿಸಲು ಇಲ್ಲಿ ಕಷ್ಟವಾಗುವ ವಿಚಾರ ತಿಳಿದುಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸ್ಥಳೀಯರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು.- ಅನಿರುದ್ಧ, ಯೋಜನಾ ನಿರ್ದೇಶಕ, ಎನ್‌ಎಚ್‌ಎಐ, ಮಂಗಳೂರು