ಮಾಡದ ತಪ್ಪಿಗೆ ಪರದಾಡುತ್ತಿರುವ ಅನಾಥ ಮಕ್ಕಳು

16082021 Gorebal orphaned children
Published on

ತಂದೆ ಮೊದಲೇ ತೀರಿಕೊಂಡಿದ್ದ, ತಾಯಿ ಕೊಲೆಯಾಗಿದ್ದಳು | ಅಜ್ಜ-ಅಜ್ಜಿಯಿಂದ ಸದ್ಯಕ್ಕೆ ನಡೆದಿದೆ ಆರೈಕೆ | ಗೊರೇಬಾಳದಲ್ಲೊಂದು ಮನ ಕಲಕುವ ಘಟನೆ

ಗೊರೇಬಾಳ: ಮೊದಲೇ ತಂದೆ ತೀರಿಕೊಂಡಿದ್ದ. ತಾಯಿ ಕೊಲೆಯಾಗಿ ಹೋದಳು. ಈಗ ನಾಲ್ವರು ಹೆಣ್ಣು ಮಕ್ಕಳು ಅನಾಥರಾಗಿದ್ದು, ಇವರ ಭವಿಷ್ಯದ ಬಗ್ಗೆ ಬಂಧುಗಳು ಚಿಂತಿತರಾಗಿದ್ದಾರೆ.

ಗೊರೇಬಾಳನ ಅನಾಥ ಮಕ್ಕಳಾದ ಗಾಯತ್ರಿ, ಪವಿತ್ರ, ಪರಿಮಳ ಮತ್ತು ಚೈತನ್ಯ ಅವರ ಕರುಣಾಜನಕ ಕಥೆ. ಸದ್ಯ ಅಜ್ಜ-ಅಜ್ಜಿಯೇ ದಿಕ್ಕಾಗಿದ್ದಾರೆ. ಈ ಮಕ್ಕಳ ಪೋಷಣೆ, ವಿದ್ಯಾಭ್ಯಾಸಕ್ಕೆ ಸರ್ಕಾರ ನೆರವು ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ನಡೆದದ್ದೇನು?: ಗಂಡನನ್ನು ಕಳೆದುಕೊಂಡಿದ್ದ ನಾಲ್ಕು ಮಕ್ಕಳ ತಾಯಿ ರೇಣುಕಮ್ಮ ಸಂತೆಗೆಂದು ತೆರಳಿದಾಕೆ ಮರಳಿ ಬಂದಿರಲಿಲ್ಲ. ಆಕೆ ಜು.6ರಂದು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಶೋಧ ನಡೆಸಿದಾಗ ಭಯಾನಕ ಸತ್ಯವೊಂದು ಬಯಲಾಯಿತು. ರೇಣುಕಮ್ಮ ಕೊಲೆಯಾಗಿದ್ದು, ಆಕೆಯ ಶವ ಸಿಂಧನೂರಿನ ಹೊರವಲಯದ ಗಿಡ ಗಂಟೆಗಳಲ್ಲಿ ಪತ್ತೆಯಾಗಿತ್ತು. ಈಕೆಯನ್ನು ಕೊಲೆ ಮಾಡಿದ ನಿಂಗಪ್ಪನನ್ನು ಬಂಧಿಸಿ ವಿಚಾರಿಸಿದಾಗ ಮತ್ತೊಂದು ಭೀಕರ ಸತ್ಯ ಬಯಲಾಯಿತು. ರೇಣುಕಮ್ಮ-ನಿಂಗಪ್ಪ ನಡುವೆ ಸಂಬಂಧ ಏರ್ಪಟ್ಟಿತ್ತು. ಇದರಿಂದಾಗಿ ಮದುವೆ ಮಾಡಿಕೊಳ್ಳುವಂತೆ ರೇಣುಕಮ್ಮ ನಿಂಗಪ್ಪಗೆ ಗಂಟು ಬಿದ್ದಿದ್ದಳು. ಇದರಿಂದಾಗಿ ನಿಂಗಪ್ಪ ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಮಾಡಿದ ಅಪರಾಧವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದ.

ಮಾಡಿದ ತಪ್ಪಿಗೆ ರೇಣುಕಮ್ಮ ಕೊಲೆಯಾದರು. ಕೊಲೆ ಮಾಡಿದ ನಿಂಗಪ್ಪ ಜೈಲು ಪಾಲಾದ. ಯಾವ ತಪ್ಪೂ ಮಾಡ ನಾಲ್ವರು ಹೆಣ್ಣು ಮಕ್ಕಳು ಈಗ ಅನಾಥರಾಗಿದ್ದಾರೆ. ಇವರ, ಪಾಲನೆ, ಪೋಷಣೆ, ಶಿಕ್ಷಣ ಹೇಗೆ ಎಂಬ ಚಿಂತೆ ಕಾಡತೊಡಗಿದೆ ಎಂದು ಕೊಲೆಯಾದ ರೇಣುಕಮ್ಮ ಸಂಬಂಧಿ ದುರಗೇಶ ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net