ಗೊರೇಬಾಳ ಗ್ರಾಪಂ; ಆರು ಜನರ ಸದಸ್ಯತ್ವ ಅನರ್ಹ

Published on

15ನೇ ಹಣಕಾಸು ಯೋಜನೆ ಅನುದಾನ ದುರ್ಬಳಕೆ ಹಿನ್ನೆಲೆ ಕ್ರಮ

ಗೊರೇಬಾಳ: 15ನೇ ಹಣಕಾಸು ಯೋಜನೆ ಅನುದಾನ ದುರ್ಬಳಕೆ ಆರೋಪದ ಮೇರೆಗೆ ಇಲ್ಲಿನ ಗ್ರಾಪಂ ಆರು ಜನರ ಸದಸ್ಯತ್ವ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶಿಸಿದ್ದಾರೆ.

2022ರಲ್ಲಿ 15ನೇ ಹಣಕಾಸು ಯೋಜನೆಯಡಿ ತುಂಡು ಗುತ್ತಿಗೆದಾರೊಂದಿಗೆ ಒಪ್ಪಂದ ಮಾಡಿಕೊಂಡು ಐದು ಜನ ಸದಸ್ಯರು ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಗ್ರಾಪಂ ಹಣ ವರ್ಗಾಸಿಕೊಂಡಿದ್ದರು. ಈ ಕುರಿತು ಪಿ.ಪ್ರಸಾದ ಮುತ್ತಣ್ಣ ಹಂಚಿನಾಳಕ್ಯಾಂಪ್ ಎನ್ನುವರು ಇಲಾಖೆಗೆ ದೂರು ಸಲ್ಲಿಸಿದ್ದರು.

ಪ್ರಾದೇಶಿಕ ಆಯುಕ್ತರ ಸೂಚನೆಯಂತೆ 2021-22ರಲ್ಲಿ 15ನೇ ಹಣಕಾಸು ಯೋಜನೆಯಡಿ ನಡೆದ ಕಾಮಗಾರಿಗಳ ವಿವರ, ಹಣ ಪಡೆದ ಬಗ್ಗೆ ಜಿಪಂ ಸಿಇಒ ಹಾಗೂ ತಾಪಂ ಇಒ ತನಿಖೆ ನಡೆಸಿ, ವರದಿ ಸಲ್ಲಿಸಿದ್ದರು. ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರಾದ ನಾಗಮ್ಮ, ಈರಮ್ಮ, ಅಂಬಮ್ಮ, ವರ್ದಿನಿ, ಸಾಂಬಶಿವರಾಯ, ಬಿ.ರಾಮಕೃಷ್ಣರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ)(2) ರನ್ವಯ ಮುಂದಿನ ಆರು ವರ್ಷಗಳ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net