ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉತ್ತಮ ಭವಿಷ್ಯ; ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ

Hampanagouda Badarli
ಹಂಪನಗೌಡ ಬಾದರ್ಲಿ.
Published on


ಗೊರೇಬಾಳ: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉತ್ತಮ ಭವಿಷ್ಯವಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಸಮೀಪದ ಭೀಮರಾಜ ಕ್ಯಾಂಪ್‌ನಲ್ಲಿ ಸ್ಥಳೀಯ ಯುವಕರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಏಳು ವರ್ಷಗಳ ಬಿಜೆಪಿ ಆಡಳಿತ ನೋಡಿ ಜನರು ಬೇಸತ್ತಿದ್ದಾರೆ . ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಸರ್ಕಾರದ ಆಡಳಿತ ವೈಫಲ್ಯದಿಂದ ಗೊಬ್ಬರ, ಕ್ರಿಮಿನಾಶಕ, ಅಡುಗೆ ಎಣ್ಣೆ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಬಡವರು ಜೀವನ ಮಾಡುವುದೇ ದುಸ್ತರವಾಗಿದೆ. ಕೃಷಿ ಉತ್ಪನ್ನಗಳ ಧಾರಣೆ ಇಳಿಮುಖವಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು.

ದೇಶದಲ್ಲಿ ಉದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕಲಂ 371 (ಜೆ) ಅಡಿ ಕಲ್ಯಾಣ ಕರ್ನಾಟಕ ಭಾಗದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದ್ದು ಕಾಂಗ್ರೆಸ್. ಉದ್ಯೊಗ ಖಾತ್ರಿ ಯೋಜನೆಯೂ ಕಾಂಗ್ರೆಸ್ ಕೊಡುಗೆಯಾಗಿದೆ ಎಂದು ಹಂಪನಗೌಡ ಬಾದರ್ಲಿ ತಿಳಿಸಿದರು. ಜಿಪಂ ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡರ, ಮಹಿಳಾ ಘಟಕದ ಬ್ಲಾಕ್ ಅಧ್ಯಕ್ಷೆ ದಾಕ್ಷಾಯಣಿ ಮಾಲಿ ಪಾಟೀಲ್, ಗ್ರಾಪಂ ಸದಸ್ಯರಾದ ಕೆ.ರಾಘವೇಂದ್ರ, ಸಾಂಬಶಿವರಾವ್, ರಾಮಕೃಷ್ಣ, ಸುಬ್ಬರಾವ್, ಸತ್ಯನಾರಾಯಣ, ವಾಸವಿ, ರಾಮುಲು, ನರೇಂದ್ರ, ಆಂಜನೇಯ, ಪ್ರಸಾದ್, ಪ್ರಮುಖರಾದ ಎಂ.ರಂಗನಗೌಡ, ಭೀಮನಗೌಡ ನೆಟೆಕಲ್, ದಶರಥ ರಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net