

ಕಡೂರು: ಕಡೂರಿನಲ್ಲಿ ಅನೇಕ ದಾನಿಗಳಲ್ಲಿ ಆರ್ಯ ವೈಶ್ಯ ಸಮಾಜದ ಗೊರವಯ್ಯ ಶೆಟ್ಟಿ ಪ್ರಮುಖ ಎಂದು ಆರ್ಯ ವೈಶ್ಯ ಸಂಘದ ಅಧ್ಯಕ್ಷ ಕೆ.ಎಸ್.ನಾಗೇಂದ್ರ ಗುಪ್ತ ಹೇಳಿದರು.
ಪಟ್ಟಣದಲ್ಲಿ ಬುಧವಾರ ಶ್ರೀ ಉಮಾಮಹೇಶ್ವರ ದೇವಸ್ಥಾನದ 125ನೇ ವಾರ್ಷಿಕೋತ್ಸವದ ಸಮಾರೋಪದಲ್ಲಿ ಮಾತನಾಡಿ, ಪಟ್ಟಣದ ಪ್ರಮುಖ ವರ್ತಕರಾಗಿದ್ದ ಗೊರವಯ್ಯ ಶೆಟ್ಟಿ ನಾಟಿ ವೈದ್ಯರಾಗಿಯೂ ಪ್ರಸಿದ್ಧರಾಗಿದ್ದರು. ಗ್ರಾಮೀಣ ಭಾಗದ ವ್ಯಾಜ್ಯಗಳನ್ನು ಪರಿಹರಿಸುತ್ತಿದ್ದ ಅವರು, ಕಾಶಿಯಿಂದ ಶಿವಲಿಂಗ ತಂದು ಪಟ್ಟಣದಲ್ಲಿ ಪ್ರತಿಷ್ಠಾಪಿಸಿದರು. ಅಪರೂಪದ ಶಿವಪಂಚಾಯತನ ದೇವಸ್ಥಾನಕ್ಕೆ 125 ವರ್ಷಗಳು ತುಂಬಿದ್ದು, ಧಾರ್ಮಿಕ ಕಾರ್ಯಗಳನ್ನು ಸಮಾಜ ಬಾಂಧವರ ಸಹಕಾರದೊಂದಿಗೆ ನಡೆಸಲಾಗಿದೆ. ದೇವಸ್ಥಾನದ ನಿರ್ವಹಣೆ ಜತೆಯಲ್ಲೇ ಆರ್ಯ ವೈಶ್ಯ ಸಮಾಜದ ಅಭಿವೃದ್ಧಿಯೂ ನಡೆಯುತ್ತಲಿದೆ. 1965ರಲ್ಲಿ ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನ ಲೋಕಾರ್ಪಣೆಗೊಂಡಿತು. ಎಲ್ಲ ಧರ್ಮೀಯರೊಡನೆ ಉತ್ತಮ ಬಾಂಧವ್ಯದಿಂದ ವೈಶ್ಯ ಸಮಾಜ ಸಹಬಾಳ್ವೆ ನಡೆಸುತ್ತಿದೆ ಎಂದು ಹೇಳಿದರು.
125ನೇ ವಾರ್ಷಿಕೋತ್ಸವ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ಕೆ.ಎಸ್.ಸುದರ್ಶನ್ ಮಾತನಾಡಿ, ಸಮಾಜ ಬಾಂಧವರು ಧಾರ್ಮಿಕವಾಗಿ ಸದಾ ಕ್ರಿಯಾಶೀಲರಾಗಿರುತ್ತಾರೆ. ಅದೇ ರೀತಿ ಸಮಾಜದಿಂದ ದೇವಸ್ಥಾನ, ಕಲ್ಯಾಣ ಮಂಟಪ, ರುದ್ರಭೂಮಿ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಎಲ್ಲರ ಸಹಕಾರ ಹೀಗೆಯೇ ಮುಂದುವರಿಯಲಿ ಎಂದರು.
ದೇವಸ್ಥಾನದ ಸಂಸ್ಥಾಪಕ ಗೊರವಯ್ಯ ಶೆಟ್ಟರ ವಂಶಸ್ಥ ಸುದರ್ಶನ್ ಕುಟುಂಬದವರನ್ನು ಗೌರವಿಸಲಾಯಿತು. ಸಮಾಜದ ಮುಖಂಡರಾದ ದ್ವಾರಕಾನಾಥ್ ಬಾಬು, ವಿನುತಾ ಬಾಬು, ಬಿ.ಎಸ್.ಸತೀಶ್, ಟಿ.ಡಿ.ಸತ್ಯನ್, ಭಂಡಿ ರಂಗನಾಥ್, ಜಿಲ್ಲಾ ಸಮಿತಿ ಅಧ್ಯಕ್ಷ ವೆಂಕಟೇಶ್, ಡಾ. ಎನ್.ಸುರೇಂದ್ರನಾಥ್, ಮಂಜುಳಾ ಗುಪ್ತ, ಡಿ.ಪ್ರಶಾಂತ್, ಮಧು, ಶಾಂತಕುಮಾರ್, ಆರ್.ಪ್ರದೀಪ್‌ಕುಮಾರ್, ಶಶಿ, ಎಂ.ದಿಲೀಪ್, ಪ್ರವೀಣ್‌ಕುಮಾರ್, ಆರ್ಯ ವೈಶ್ಯ ಸಂಘದ ನಿರ್ದೇಶಕರು, ಸದಸ್ಯೆಯರು ಇದ್ದರು.