ಗೋರಕ್ಷಕರ ವಿರುದ್ಧ ಪ್ರಕರಣ ರದ್ದು?

go
Published on

- ವೇಣುವಿನೋದ್ ಕೆ.ಎಸ್.ಮಂಗಳೂರು

ಕರ್ನಾಟಕ ಗೋಹತ್ಯಾ ನಿಷೇಧ ತಿದ್ದುಪಡಿ ಕಾಯ್ದೆ ಜಾರಿ ಬೆನ್ನಲ್ಲೇ, ಹಿಂದಿನ ವರ್ಷಗಳಲ್ಲಿ ಗೋ ರಕ್ಷಣೆ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ.

ಗೋವುಗಳ ಅಕ್ರಮ ಸಾಗಾಟದ ವೇಳೆ ಬಾಹನಗಳನ್ನು ಅಡ್ಡಗಟ್ಟಿ, ಜಾನುವಾರುಗಳನ್ನು ಬಿಡಿಸಲು ಮುಂದಾಗಿದ್ದ ಬಹಳಷ್ಟು ಕಾರ್ಯ ಕರ್ತರ ಮೇಲೆ ಕೊಲೆ ಯತ್ನ, ದರೋಡೆಯಂತಹ ಸೆಕ್ಷನ್ ಹಾಕಿ ಧ್ವನಿ ಅಡಗಿಸುವ ಪ್ರಯತ್ನ ಹಿಂದಿನ ಸರ್ಕಾರಗಳಿದ್ದಾಗ ಆಗಿದೆ. ಕರಾವಳಿ ಜಿಲ್ಲೆ, ಹಾಸನ, ಸಕಲೇಶಪುರ, ಬೆಳಗಾವಿ, ಕೊಡಗು ಮುಂತಾದೆಡೆ ಇಂತಹ ಪ್ರಕರಣಗಳಿವೆ. ಅವುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಹಿಂದು ಸಂಘಟನೆ ಕಾರ್ಯಕರ್ತರು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ.

ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಪ್ರವಾಸ ತೆರಳಿದ ಅನೇಕ ಜಿಲ್ಲೆಗಳಲ್ಲಿ ಹಿಂದು ಸಂಘಟನೆ ಮುಖಂಡರು ಇದೇ ವಿಚಾರವನ್ನು ಅವರ ಗಮನಕ್ಕೆ ತಂದಿದ್ದಾರೆ. ‘ವಿಜಯವಾಣಿ’ ಜತೆ ಮಾತನಾಡಿದ ವಿಶ್ವ ಹಿಂದು ಪರಿಷತ್ ವಿಭಾಗೀಯ ಸಂಚಾಲಕ ಶರಣ್ ಪಂಪ್‌ವೆಲ್, ಮಂಗಳೂರಿನಲ್ಲಿ ಹಿಂದಿನಿಂದಲೂ ಗೋ ರಕ್ಷಣೆ ವಿಚಾರದಲ್ಲಿ ಹಿಂದು ಸಂಘಟನೆಗಳು ಹೆಚ್ಚು ಕ್ರಿಯಾಶೀಲವಾಗಿದ್ದು ಸಾಕಷ್ಟು ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳು ದಾಖಲಾಗಿವೆ. ಆ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.

ಗೋಸಂರಕ್ಷಣೆ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ಕೊಡಲೇಬೇಕು. ವಿನಾಕಾರಣ ದರೋಡೆ, ಕೊಲೆಯತ್ನದಂತಹ ಪ್ರಕರಣ ದಾಖಲಾಗಿರುವುದನ್ನು ಹಿಂಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದೇವೆ. ಈ ಬಗ್ಗೆ ಹಿಂದೆ ಗೃಹಸಚಿವರೂ ಪ್ರಸ್ತಾಪ ಮಾಡಿದ್ದಾರೆ. ಈಗ ಪಶುಸಂಗೋಪನೆ ಸಚಿವರು ಕೂಡ ಪ್ರಸ್ತಾಪ ಮಾಡಿದ್ದಾರೆ. ಕನಿಷ್ಠ 150ರಿಂದ 200 ಸುಳ್ಳು ಕೇಸಿನ ಪ್ರಕರಣಗಳಿವೆ. ಅವುಗಳನ್ನು ಹಿಂಪಡೆಯಬೇಕು ಎನ್ನುತ್ತಾರೆ. ಈ ಪ್ರಸ್ತಾಪ ಸದ್ಯ ಪ್ರಾಥಮಿಕ ಹಂತದಲ್ಲಿದೆ, ರಾಜ್ಯ ಸರ್ಕಾರ ಅದನ್ನು ಪರಿಗಣಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಪ್ರಾಣಿ ಕಲ್ಯಾಣ ಮಂಡಳಿ ರಾಜ್ಯ ಸಮಿತಿ ಸದಸ್ಯ ವಿನಯ್ ಎಲ್.ಶೆಟ್ಟಿ. ವಿವರಿಸಿದ್ದಾರೆ.

ಸಚಿವ ಪ್ರಭು ಚವ್ಹಾಣ್ ಅವರಿಗೆ ಹಾಸನ, ಸಕಲೇಶಪುರ, ಬೆಳಗಾವಿಯಲ್ಲಿ ಇಂತಹ ಸುಳ್ಳು ಕೇಸ್ ಹಿಂಪಡೆಯಬೇಕು ಎಂಬ ಒತ್ತಾಯಗಳು ಬಂದಿವೆ. ಸರ್ಕಾರ ಮನಸ್ಸು ಮಾಡಿದರೆ ಪ್ರಕರಣ ಹಿಂದಕ್ಕೆ ಪಡೆಯಬಹುದು. ಎಲ್ಲ ಪ್ರಕರಣ ಬೇಡ, ಕನಿಷ್ಠ ಸುಳ್ಳು ಆರೋಪದ ಸೆಕ್ಷನ್‌ಗಳನ್ನಾದರೂ ತೆಗೆಯಬೇಕು ಎನ್ನುವುದು ಗೋ ಸಂರಕ್ಷಣಾ ಕಾರ್ಯಕರ್ತರ ಒತ್ತಾಯ.

ಐಡಿ ಕಾರ್ಡ್ ಶೀಘ್ರ; ಸೊಸೈಟೀಸ್ ಫಾರ್ ಪ್ರಿವೆನ್ಶನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್-ಎಸ್‌ಪಿಸಿಎ ಎನ್ನುವ ತಂಡಗಳು ಪ್ರತೀ ಜಿಲ್ಲೆಯಲ್ಲಿವೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅದರ ಸಂಚಾಲಕರು. ಅಂತಹ ತಂಡಗಳಿಗೆ ಗೋಸಾಗಾಟ ತಡೆಯುವ ಅನುಮತಿ ಇದೆ. ಅವರಿಗೆ ಗುರುತುಚೀಟಿ ನೀಡುವ ಸಾಧ್ಯತೆ ಇದೆ. ಗೋರಕ್ಷಕರು ಗೋ ಅಕ್ರಮ ಸಾಗಾಟ ತಡೆಯುವಾಗ ಪೊಲೀಸರಿಗೆ ಪೂರ್ವ ಮಾಹಿತಿ ನೀಡಬೇಕು ಅಥವಾ ಎಸ್‌ಪಿಸಿಎ ಸದಸ್ಯರೊಂದಿಗೆ ಕಾರ್ಯಾಚರಣೆ ಮಾಡಬೇಕು.

ಪಶುಸಂಗೋಪನಾ ಸಚಿವರ ಹೇಳಿಕೆ ಸ್ವಾಗತಾರ್ಹ. ಹಿಂದಿನ ಸರ್ಕಾರ ಗೋರಕ್ಷಕರನ್ನು ಗುರಿಯಾಗಿಸಿ ಹಲವು ಸುಳ್ಳು ಕೇಸ್ ದಾಖಲಿಸಿದೆ. ನಾವು ಬೇಕಾದರೆ ಲಿಸ್ಟ್ ಕೊಡುತ್ತೇವೆ, ಸರ್ಕಾರ ಅಂತಹ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು. ಈಗಿನ ಗೋಹತ್ಯಾ ನಿಷೇಧ ತಡೆ ತಿದ್ದುಪಡಿ ಕಾಯ್ದೆಯಲ್ಲೂ ಗೋರಕ್ಷಕರಿಗೆ ತೊಂದರೆ ಕೊಡಬಾರದು ಎಂಬ ಅಂಶ ಇದೆ.

-ಶರಣ್ ಪಂಪ್‌ವೆಲ್, ವಿಎಚ್‌ಪಿ ವಿಭಾಗೀಯ ಸಂಚಾಲಕ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net