

ಮಂಡ್ಯ: ಮದ್ದೂರು ತಾಲೂಕು ಗೋಪನಹಳ್ಳಿ ಗ್ರಾಮದ ಚೌಡೇಶ್ವರಿ ದೇವಾಲಯದ ಉದ್ಘಾಟನೆ, ವಿಗ್ರಹ ಪುನರ್ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವ ಫೆ.1 ಮತ್ತು 2ರಂದು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥ ಕೆಂಪರಾಜು ತಿಳಿಸಿದರು.
1ರಂದು ದೇವಾಲಯದಲ್ಲಿ ವಿಗ್ರಹ ಪುನರ್‌ಪ್ರತಿಷ್ಠಾಪನೆ ಹಾಗೂ ಮಹಾಕುಂಬಾಭಿಷೇಕ ಮಹೋತ್ಸವ ಸೇರಿದಂತೆ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 2ರಂದು ಮಧ್ಯಾಹ್ನ 3ಕ್ಕೆ ದೇವಾಲಯ ಉದ್ಘಾಟನೆಯಾಗಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಕಳಸ ಸ್ಥಾಪಿಸುವರು. ಆದಿಚುಂಚನಗರಿ ಶಾಖಾಮಠ ವಿಶ್ವ ಮಾನವ ಕ್ಷೇತ್ರದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಮೂಲ ದೇವರ ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಮದ್ದೂರು ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ವಿಗ್ರಹ ಶಿಲ್ಪಿ, ದೇವಸ್ಥಾನ ನಿರ್ಮಾಣ ಶಿಲ್ಪಿ, ರಾಜಗೋಪುರ ನಿರ್ಮಾಣ, ಯಾತ್ರಿಕರ ತಂಗುದಾಣ ನಿರ್ಮಾಣ, ಕಲ್ಯಾಣಿ ನಿರ್ಮಾಣ ಸೇವಾರ್ಥಿಗಳನ್ನು ಸನ್ಮಾನಿಸುವರು ಎಂದು ವಿವರಿಸಿದರು.