

ನೆಲಮಂಗಲ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಟ್ರಸ್ಟ್ ಗೋಪಾಲಪುರ ಗ್ರಾಮದ ಕೆರೆ ಅಭಿವೃದ್ಧಿಪಡಿಸಿರುವುದು ಶ್ಲಾಘನೀಯ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ಎಸ್‌ಕೆಡಿಆರ್‌ಡಿಪಿ, ರಾಜ್ಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ, ಗೋಪಾಲಪುರ ಕೆರೆ ಬಳಕೆದಾರರ ಸಂಘ ಮತ್ತು ಗೋಪಾಲಪುರ ಗ್ರಾಪಂ ಮಂಗಳವಾರ ಆಯೋಜಿಸಿದ್ದ ಪುನಶ್ಚೇತನಗೊಂಡ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಗೋಪಾಲಪುರ ಕೆರೆ ಅಂದಾಜು 90 ಎಕರೆ ವಿಸ್ತೀರ್ಣವಿದ್ದು, ಹೂಳು ತೆಗೆಯಲಾಗಿದೆ.
ರಾಜ್ಯ ಸರ್ಕಾರ ಕೂಡ ರೈತಪರ ಕಾರ್ಯಗಳನ್ನು ಮಾಡುತ್ತಿದ್ದು, ಎಸ್‌ಕೆಡಿಆರ್‌ಡಿಪಿ ಸಹಕಾರದಲ್ಲಿ ಇದುವರೆಗೆ 95 ಕೆರೆಗಳನ್ನು ಪುನಶ್ಚೇತನಗೊಳಿಸಿದೆ ಎಂದು ತಿಳಿಸಿದರು.
ಕೆರೆ ಆವರಣದಲ್ಲಿ ಹೊಸದಾಗಿ ಅಳವಡಿಸಿರುವ ನಾಮಲಕವನ್ನು ಶಾಸಕ ಎಸ್.ಆರ್. ವಿಶ್ವನಾಥ್ ಉದ್ಘಾಟಿಸಿದರು. ಬಳಿಕ ಕೆರೆಗೆ ಬಾಗಿನ ಅರ್ಪಿಸಿದರು.
ಹಸ್ತಾಂತರಗೊಂಡ 251ನೇ ಕೆರೆ: ಕೆರೆ ಸಂಜೀವಿನಿ ಕಾರ್ಯಕ್ರಮದಲ್ಲಿ ಎಸ್‌ಕೆಡಿಆರ್‌ಡಿಪಿ ರಾಜ್ಯದಲ್ಲಿ 250ಕ್ಕೂ ಹೆಚ್ಚು ಕೆರೆಗಳನ್ನು ದತ್ತು ಪಡೆದುಕೊಂಡು ಪುನಶ್ಚೇತನಗೊಳಿಸಿದೆ. ಬಳಕೆಗೆ ಹಸ್ತಾಂತರಗೊಂಡ 251ನೇ ಕೆರೆ ಎಂಬ ಹೆಗ್ಗಳಿಕೆ ಗೋಪಾಲಪುರ ಕೆರೆಯದ್ದಾಗಿದೆ ಎಂದು ಎಸ್.ಆರ್.ವಿಶ್ವನಾಥ್ ಮಾಹಿತಿ ನೀಡಿದರು.
50 ಸಾವಿರ ಟ್ರ್ಯಾಕ್ಟರ್ ಮಣ್ಣು ಖರೀದಿ: ಗೋಪಾಲಪುರ ಕೆರೆಯ ಪುನಶ್ಚೇತನಕ್ಕೆ ಒಟ್ಟು 65 ಲಕ್ಷ ರೂ. ವೆಚ್ಚವಾಗಿದೆ. ಕೆರೆ ಅಂಗಳದಿಂದ ತೆಗೆದ 50 ಸಾವಿರ ಟ್ರ್ಯಾಕ್ಟರ್ ಮಣ್ಣನ್ನು ಖರೀದಿಸುವ ಮೂಲಕ ರೈತರು 40 ಲಕ್ಷ ರೂ. ಕೊಟ್ಟಿದ್ದಾರೆ. ಉಳಿದ 25 ಲಕ್ಷ ರೂ. ಅನ್ನು ಎಸ್‌ಕೆಡಿಆರ್‌ಡಿಪಿ ಕೊಟ್ಟಿದೆ ಎಂದು ಶಾಸಕರು ವಿವರಿಸಿದರು.
ಮಾಸಾಶನ, ವ್ಹೀಲ್‌ಚೇರ್ ವಿತರಣೆ: ಗೋಪಾಲಪುರದ ಸಿದ್ದಗಂಗಮ್ಮ ಎಂಬುವರಿಗೆ ನಿರ್ಗತಿಕರ ಮಾಸಾಶನ ಹಾಗೂ ಬಾವಿಕೆರೆ ಗ್ರಾಮದ ನರಸಮ್ಮ ಎಂಬ ಅಂಗವಿಕಲೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ರವಿಕುಮಾರ್ ವ್ಹೀಲ್‌ಚೇರ್ ವಿತರಿಸಿದರು. ಮುಖಂಡ ಕೆ.ಕೃಷ್ಣಪ್ಪ, ಗ್ರಾಪಂ ಸದಸ್ಯರಾದ ಬಿ.ನಾಗರಾಜು, ಚಂದ್ರಶೇಖರ್, ಎಚ್.ಎ. ಶ್ರೀನಿವಾಸ್, ಜಿ.ಸಿ. ರವಿಕುಮಾರ್, ಟಿ.ಎಂ. ಬಸವರಾಜು, ಎನ್. ವಿಜಯ್‌ಕುಮಾರ್, ಎಚ್. ಲತಾ, ಕಮಲಮ್ಮ, ಕೆ.ಸಿ.ಮಂಜುಳಾ, ಎನ್. ಸುಜಾತಾ, ಭಾಗ್ಯಮ್ಮ ಮತ್ತಿತರರು ಇದ್ದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಅವರು ಗ್ರಾಮೀಣ ಜನರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ನಾಡು, ಸನ್ಮಾರ್ಗದಲ್ಲಿ ನಡೆಯಲು ಸಮರ್ಥ ಗುರುವಿನ ಅಗತ್ಯವಿದ್ದು, ಹೆಗ್ಡೆ ಅವರು ಆ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದಾರೆ. ಎಸ್.ಆರ್. ವಿಶ್ವನಾಥ್, ಶಾಸಕರು