

ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾ.22ರಿಂದ 28ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಮಾ.25 ರಂದು ಬ್ರಹ್ಮ ರಥೋತ್ಸವ ಜರುಗಲಿದೆ.
ಬ್ರಹ್ಮ ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ. 22 ರಂದು ಬೆಳಗ್ಗೆ ಫಲ ಪಂಚಾಮೃತಾಭಿಷೇಕ, ಸಂಜೆ ಅಂಕುರಾರ್ಪಣೆ, ಗರುಡ ಪ್ರತಿಷ್ಠಾ ರಕ್ಷಾಬಂಧನ. 23 ರಂದು ಬೆಳಗ್ಗೆ ಉತ್ಸವ, ಅಷ್ಪಬಲಿ, ಧ್ವಜಾರೋಹಣ, ಸಂಜೆ ಭೇರಿತಾಡನ ಯಾಗಶಾಲಾ ಪ್ರವೇಶ. 24 ರಂದು ಬೆಳಗ್ಗೆ ಉತ್ಸವ, ಸಂಜೆ 4 ಗಂಟೆಗೆ ಕಾಶಿಯಾತ್ರಾ ಉತ್ಸವ ಸಂಬಂಧ ಮಾಲಾಪೂರ್ವಕ ಶ್ರೀರುಕ್ಮಿಣಿ ಸತ್ಯಭಾಮಾ ಸಹಿತ ಶ್ರೀಹಿಮವದ್ ಗೋಪಾಲಸ್ವಾಮಿ ಅವರ ‘ಕಲ್ಯಾಣೋತ್ಸವ’. 25 ರಂದು ಬೆಳಗ್ಗೆ ‘ಬ್ರಹ್ಮ ರಥೋತ್ಸವ, ಸಂಜೆ ಶಾಂತ್ಯುತ್ಸವ. 26ರಂದು ಬೆಳಗ್ಗೆ ಉತ್ಸವ ಕೈಂಕರ್ಯ ಮತ್ತು ಬೆಳ್ಳಿ ಗರುಡೋತ್ಸವ ಸಂಜೆ ಡೋಲೋತ್ಸವ ಶಯನೋತ್ಸವ. 27 ರಂದು ಸಂಧಾನ ಲೀಲೋತ್ಸವ, ಅವಭೃತ ಸ್ನಾನ, ಸಂಜೆ ಉತ್ಸವ, ಫಣಿಮಾಲಾ ಪ್ರಬಂಧಸೇವೆ, ಪೂರ್ಣಾಹುತಿ. 28ರಂದು ಬೆಳಗ್ಗೆ ಮಹಾಭಿಷೇಕ, ಮಹಾಮಂಗಳಾರತಿ, ದ್ವಾದಶಾರಾಧನಾ, ಪುಷ್ಪಯಾಗ ಧ್ವಜಾವರೋಹಣ, ಉಧ್ವಾಸನ ಪ್ರಬಂಧ ಸೇವೆ ಸೇತೂ ಸೇವೆ ಮೂಕಬಲಿ ವಿಶೇಷ ಉತ್ಸವ ಕಾರ್ಯಕ್ರಮ ನೆರವೇರಲಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೊರತುಪಡಿಸಿ ಉಳಿದ ದ್ವಿಚಕ್ರ, 4 ಚಕ್ರ, ಮಿನಿ ವಾಹನ ಮತ್ತು ಇತರ ವಾಹನಗಳಲ್ಲಿ ಬರುವ ಭಕ್ತಾದಿಗಳು, ಸಾರ್ವಜನಿಕರು ತಮ್ಮ ವಾಹನಗಳನ್ನು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಮೈದಾನದಲ್ಲಿ ನಿಲ್ಲಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಿಗದಿತ ದರ ಪಾವತಿಸಿ ದೇವರ ದರ್ಶನಕ್ಕೆ ತೆರಳಬಹುದು. ಸಾರ್ವಜನಿಕರು, ಭಕ್ತಾದಿಗಳು ಸಹಕರಿಸಬೇಕು ಎಂದು ಗುಂಡ್ಲುಪೇಟೆ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.