

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿರಿಯ ಅರ್ಚಕ ದಿ.ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಪ್ರಯುಕ್ತ ನೀಡುವ ಪ್ರಶಸ್ತಿ ಈ ಬಾರಿ ಹಿರಿಯ ಯಕ್ಷಗಾನ ವೇಷಧಾರಿ ಹಾಗೂ ಕಟೀಲು ಎರಡನೇ ಮೇಳದ ಪ್ರಬಂಧಕ ಶ್ರೀಧರ ಪೂಜಾರಿ ಪಂಜಾಜೆ ಅವರಿಗೆ ನೀಡಲಾಗುವುದು.
ಆಸ್ರಣ್ಣ ಅಭಿಮಾನಿ ಬಳಗ ಕದ್ರಿ ಈ ಪ್ರಶಸ್ತಿ ನೀಡುತ್ತಿದ್ದು ಚಿನ್ನದ ಪದಕದೊಂದಿಗೆ ಶ್ರೀಧರ ಪೂಜಾರಿಯವರನ್ನು ಗೌರವಿಸಲಾಗುವುದು. ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ಬಂಧುಗಳು ಆ.26ರಂದು ಸಂಜೆ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಹಮ್ಮಿಕೊಂಡಿರುವ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶ್ರೀಧರ ಪೂಜಾರಿ ಉಳ್ಳಾಲ ತಾಲೂಕು, ಇರಾ ಗ್ರಾಮದ ಪಂಜಾಜೆಯವರು. ಬಾಲ್ಯದಲ್ಲೇ ಯಕ್ಷಗಾನ ಕಲಾಸಕ್ತರಾಗಿ, ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲೇ ಪುಚ್ಚಕೆರೆ ವಿದ್ವಾನ್ ಕೃಷ್ಣ ಭಟ್ ಮೂಲಕ ಯಕ್ಷಗಾನದ ಪ್ರಾಥಮಿಕ ಪಾಠಗಳನ್ನು ಕಲಿತರು. ಬಳಿಕ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಕೆ.ಗೋವಿಂದ ಭಟ್ ಮತ್ತು ದಿವಾಣ ಶಿವಶಂಕರ ಭಟ್ ಅವರಿಂದ ನಾಟ್ಯಾಭ್ಯಾಸದ ತರಬೇತಿ ಪಡೆದು ಕಟೀಲು ಮೇಳ ಸೇರಿದರು. 42 ವರ್ಷದಿಂದ ಕಲಾ ಸೇವೆಗೈಯ್ಯುತ್ತಿದ್ದಾರೆ.15 ವರ್ಷಗಳಿಂದ ಕಟೀಲಿನ ಎರಡನೇ ಮೇಳದ ಪ್ರಬಂಧಕರು.
ಆರಂಭದ ದಿನಗಳಲ್ಲಿ ಸ್ತ್ರೀ ವೇಷಧಾರಿಯಾಗಿದ್ದ ಇವರು ಬಲಿಪ ನಾರಾಯಣ ಭಾಗವತರ ಪ್ರೇರಣೆಯಂತೆ ಪುಂಡು ವೇಷ ನಿರ್ವಹಿಸಿದ್ದಾರೆ. ಚಂಡ-ಮುಂಡ, ಲವ-ಕುಶ, ಅಭಿಮನ್ಯು, ರಾಮ, ಕೃಷ್ಣ, ಜಯಂತ, ಮನ್ಮಥ ಇತ್ಯಾದಿ ಅನೇಕ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಇವರಿಗೆ ಬಲಿಪ ಭಾಗವತರು, ಪೆರುವಾಯಿ ನಾರಾಯಣ ಭಟ್, ರಾಜೀವ ಶೆಟ್ಟಿ ಅಜೆಕಾರು, ಪೆರುವಾಯಿ ನಾರಾಯಣ ಶೆಟ್ಟಿ ಮೊದಲಾದವರಿಂದ ಯೋಗ್ಯ ಮಾರ್ಗದರ್ಶನ ಲಭಿಸಿದೆ.