

ರಿಪ್ಪನ್‌ಪೇಟೆ: ಸಮಾಜವಾದಿ ಚಿಂತಕ ಶಾಂತವೇರಿ ಗೋಪಾಲ ಗೌಡರು ಸಮಸ್ತ ಜನತೆಗೆ ಮಾದರಿಯಾಗಿದ್ದರು. ಇಂತಹ ಚೇತನ ನಮ್ಮವರು ಎಂಬುದೇ ಜಿಲ್ಲೆಯ ಜನತೆಯ ಹೆಮ್ಮೆ ಎಂದು ಸಾಹಿತಿ ಎನ್.ಡಿ.ಹೆಗಡೆ ಹೇಳಿದರು.
ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ತಾಲೂಕು ಕಸಾಪದಿಂದ ಆಯೋಜಿಸಿದ್ದ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮದ್ಯಮ ಕುಟುಂಬದಲ್ಲಿ ಜನಿಸಿದ ಗೋಪಾಲಗೌಡರು ಬಾಲ್ಯದಲ್ಲಿ ತಮ್ಮ ಶಿಕ್ಷಣಕ್ಕೆ ಆರ್ಥಿಕ ತೊಡಕುಂಟಾದಾಗ ಮನೆಯ ದನ ಕಾಯುವ ಗೋಪಾಲಕರಾಗಿದ್ದರು. ಸಂಬಂಧಿಕರ ಸಹಾಯದಿಂದ ವಿದ್ಯಾಭ್ಯಾಸ ಕಡೆಗೆ ಆಸಕ್ತಿ ವಹಿಸಿ, ವಿದ್ಯಾರ್ಥಿ ದಿಸೆಯಲ್ಲಿಯೇ ಮಹಾತ್ಮಾಗಾಂಧೀಜಿ ಅವರ ಹೋರಾಟದಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು ಎಂದರು.
ಸ್ವಾತಂತ್ರೃ ಹೋರಾಟದಿಂದಾಗಿ ಜೈಲು ಶಿಕ್ಷೆ ಸಹ ಅನುಭವಿಸಿ, ಜೈಲಿನಿಂದ ಬಿಡುಗಡೆ ಆಗುವಾಗ ಗೇಣಿ ರೈತರ ಪರವಾದ ಹೋರಾಟ ಅವರನ್ನು ಆಕರ್ಷಿಸಿತು. ಶೋಷಿತರ ಧ್ವನಿಯಾಗಿ ನಾಡಿನೆಲ್ಲೆಡೆ ಬೃಹತ್ ಹೋರಾಟವನ್ನು ಸಂಘಟಿಸುತ್ತಾರೆ. ಹೋರಾಟದಿಂದಲೇ ಜನರ ಧ್ವನಿಯಾಗಿದ್ದ ಗೋಪಾಲಗೌಡರು ಜನರ ಅಭಿಲಾಷೆಯಂತೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರು. ಶೋಷಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಚಿಂತಿಸುತ್ತಿದ್ದರು. ವಿರೋಧ ಪಕ್ಷದ ನಾಯಕನ ಸ್ಥಾನ ಅರಸಿ ಬಂದರೂ ತಿರಸ್ಕರಿಸಿದ್ದರು ಎಂದರು.
ಚಿಕ್ಕವಯಸ್ಸಿನಲ್ಲಿಯೇ ಅಗಾದ ಸಾಧನೆಯೊಂದಿಗೆ ರಾಷ್ಟ್ರದ ಜನಮನ ಸೆಳೆದ ಮೇರು ವ್ಯಕ್ತಿತ್ವದ ಜನನಾಯಕರಾಗಿದ್ದ ಗೋಪಾಲಗೌಡರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳ ಅಧ್ಯಯನದ ಉದ್ದೇಶದಿಂದ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಬೇಕಾಗಿದೆ ಎಂದರು.
ಸಭೆಯಲ್ಲಿ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಎಂ.ಬಿ.ಲಕ್ಷ್ಮಣಗೌಡ, ತಾಲೂಕು ಕಸಾಪ ಅಧ್ಯಕ್ಷ ತ.ಮ.ನರಸಿಂಹ, ಜಿಲ್ಲಾ ಕಸಾಪ ಕಾರ್ಯದರ್ಶಿ ಮಂಜುನಾಥ ಕಾಮತ್, ಶಿಕ್ಷಕರಾದ ರವಿ, ಎಚ್.ಎ.ರಾಧಾಕೃಷ್ಣ, ಬಿ.ಭೋಜಪ್ಪ ಇತರರಿದ್ದರು.