ರಾಜನೀತಿ ಬೋಧಿಸಿದ ಗೋಪಾಲ

HYR krishna jayanti 06
Published on

ಹಿರಿಯೂರು: ಧರ್ಮ, ಸಮಾಜ ಮತ್ತು ಸಮಾನತೆಗಾಗಿ ಜನಿಸಿದ ವಿಷ್ಣುವಿನ ಎಂಟನೇ ಅವತಾರವೇ ಶ್ರೀಕೃಷ್ಣ ಪರಮಾತ್ಮ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ತಾಲೂಕು ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತ್ಯುತ್ಸವದಲ್ಲಿ ಮಾತನಾಡಿ, ಧರ್ಮ ಸಂಸ್ಥಾಪನೆಗಾಗಿ ಜನ್ಮತಾಳಿದ ಶ್ರೀಕೃಷ್ಣನ ಆಚಾರ, ವಿಚಾರಗಳನ್ನು ಇಡೀ ವಿಶ್ವವೇ ಪಾಲಿಸುತ್ತಿದೆ ಎಂದರು.

ಭಗವದ್ಗೀತೆ ಮೂಲಕ ಆಧ್ಯಾತ್ಮ, ರಾಜನೀತಿ ಸಮಾಜ ನೀತಿಯನ್ನು ಜಗತ್ತಿಗೆ ಸಾರಿದ ಮಹಾತ್ಮ. ಕೃಷ್ಣ ಗೀತೆಯ ಸಾರವನ್ನು ಸ್ವಾಮಿ ವಿವೇಕಾನಂದ, ಗಾಂಧೀಜಿಯಂತಹ ಮಹಾತ್ಮರು ಅನುಸರಿಸುತ್ತಿದ್ದರು ಎಂದು ತಿಳಿಸಿದರು.

ಶ್ರೀಕೃಷ್ಣನ ರಾಜನೀತಿಯಂತೆ ತಾಲೂಕಿನ ಎಲ್ಲ ಸಮುದಾಯಗಳನ್ನು ಪ್ರೀತಿ ವಿಶ್ವಾಸದೊಂದಿಗೆ ಗೌರವಿಸಿ, ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕಾನೂನು-ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಪ್ರಾಚಾರ್ಯ ಡಾ. ಮಹೇಶ್ ಮಾತನಾಡಿ, ಶ್ರೀಕೃಷ್ಣ ಭೂಲೋಕದಲ್ಲಿ ಅಧರ್ಮ ನೆಲೆಸಿದಾಗ ಅದನ್ನು ಹೊಡೆದೋಡಿಸಲು ಶ್ರಮಿಸಿದ ಶ್ರೇಷ್ಠ ಪುರುಷ. ಆತ ಸರ್ವ ಸಮುದಾಯದ ಆರಾಧ್ಯ ದೈವ ಎಂದರು.

ಮುಖಂಡರಾದ ಕೆ.ಟಿ.ತಿಪ್ಪೇಸ್ವಾಮಿ, ಗೋಪಿ ಯಾದವ್, ದಿಂಡಾವರ ಮಹೇಶ್, ಶಿವರಂಜನಿ, ಪ್ರಭು, ಕೃಷ್ಣಮೂರ್ತಿ ಪೂಜಾರ್, ರಂಗಸ್ವಾಮಿ, ಜ್ಯೋತಿ ಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net