ಮನೆ, ಠಾಣೆಯಲ್ಲಿ ಗೋಪಾಲ ಜೋಶಿ ವಿಚಾರಣೆ

h19-Gopal Joshi 5
Published on

ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ 2 ಕೋಟಿ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ ಗೋಪಾಲ ಜೋಶಿ ಅವರನ್ನು ಬೆಂಗಳೂರು ಪೊಲೀಸರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶನಿವರ ಬಂಧಿಸಿದ್ದು, ಹುಬ್ಬಳ್ಳಿಗೆ ಕರೆತಂದು ಇಲ್ಲಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪಂಚನಾಮೆ ನಂತರದ ಪ್ರಕ್ರಿಯೆ ನಡೆಸಿದರು.
ಚಿತ್ರನಟ ದರ್ಶನನ್ನು ಬಂಧಿಸಿದ್ದ ಎಸಿಪಿ ಚಂದನ್ ನೇತೃತ್ವದ ತಂಡ ಕೊಲ್ಹಾಪುರದಲ್ಲಿ ಗೋಪಾಲ ಜೋಶಿಯನ್ನು ವಶಕ್ಕೆ ಪಡೆದ ನಂತರ ಹುಬ್ಬಳ್ಳಿಯ ಇಂದಿರಾ ಕಾಲನಿಯ ಅವರ ಮನೆಯಲ್ಲಿ ತಪಾಸಣೆ ನಡೆಸಿ ಪಂಚನಾಮೆ ನಡೆಸಿದರು. ನಂತರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲು ಕೇಶ್ವಾಪುರ ಠಾಣೆಗೆ ಬೆಂಗಳೂರು ಬಸವೇಶ್ವರ ನಗರ ಠಾಣೆ ಪೊಲೀಸರ ತಂಡ ಕರೆತಂದಿತು. ಮನೆಯಲ್ಲಿ ಯಾವುದೇ ತಪಾಸಣೆ ಮಾಡಿಲ್ಲ. ಹಣ ಸೇರಿ ಏನನ್ನೂ ಪರಿಶೀಲನೆ ಮಾಡಿಲ್ಲ ಎಂದು ಕುಟುಂಬದವರೂ ಹೇಳಿಕೊಂಡಿದ್ದರೂ ಮಾಧ್ಯಮದವರಿಗೆ ಸಿಕ್ಕ ವಿಡಿಯೋದಲ್ಲಿ ಹಣ ಎಣಿಸುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಪ್ರಕರಣದ ದೂರದಾರರಾದ ಸುನಿತಾ ಚವ್ಹಾಣ ಅವರನ್ನೂ ಠಾಣೆಗೆ ಆಗಮಿಸಿ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಹೇಳಲಾಗುತ್ತಿದೆ. ಅಲ್ಲದೇ ಗೋಪಾಲ ಜೋಶಿ ಪುತ್ರ ಅಜಯ್ ಜೋಶಿಯನ್ನು ಪುಣೆಯಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
ಸಚಿವ ಜೋಶಿ ಪಾಪದ ವ್ಯಕ್ತಿ: ಲೋಕಸಭೆ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅಮಿತ್‌ಶಾ ಹಾಗೂ ಮಾಜಿ ಪ್ರಧಾನಿ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ಇದರಲ್ಲಿ ಗೋಪಾಲ ಜೋಶಿ ಕೇಂದ್ರ ಸಚಿವ ಜೋಶಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರುದಾರರಾದ ಸುನೀತಾ ಚವ್ಹಾಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ನಮಗೆ ಟಿಕೆಟ್ ಸಿಗುವ ಸಾಧ್ಯತೆ ಇತ್ತು. ಈ ವೇಳೆ ಶೇಖರ ನಾಯಕ ಎಂಬಾತ ಕರೆಮಾಡಿ ಉತ್ತರ ಕರ್ನಾಟಕ ಭಾಗದಿಂದ ನಿಮ್ಮನ್ನು ಪಕ್ಷದಿಂದ ಕೈಬಿಡಲ್ಲ ಎಂದಿದ್ದರು. ಬೇರೆಯವರಿಗೆ ಟಿಕೆಟ್ ಸಿಕ್ಕಿದೆ ಎಂದು ಗೊತ್ತಾದಾಗ ಸುಮ್ಮನಿದ್ದೆ. ಆಗ ಗೋಪಾಲ ಜೋಶಿ ಅವರು ಕರೆಮಾಡಿ, ಈಗಿನ ಸಂಸದರಿಗೆ ಅನಾರೋಗ್ಯವಾಗಿದೆ. ನಿಮಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಆಗ 25ಲಕ್ಷ ರೂ. ಕೊಟ್ಟಿದ್ದೆ. ಅವರು 2ರಿಂದ3ಕೋಟಿ ರೂ. ಬೇಡಿಕೆ ಇಟ್ಟಿದ್ದರು. ನಾನು ಅಷ್ಟು ಕೊಡಲು ಆಗುವುದಿಲ್ಲ ಎಂದು ಹೇಳಿದ್ದೆ ಎಂದರು.
ಯಾರ ವಿರುದ್ಧ ನಾನು ದೂರು ಕೊಟ್ಟಿದ್ದೇನೋ ಅವರ ಬಗ್ಗೆ ಮಾತ್ರ ಮಾಧ್ಯಮದವರು ವಿಷಯ ಪ್ರಸ್ತಾಪ ಮಾಡಬೇಕು. ದೇವಾನಂದ ಚವ್ಹಾಣ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅಮಿತ್ ಷಾ ಮತ್ತು ಮಾಜಿ ಪ್ರಧಾನಿ ಅವರ ಪಾತ್ರವೇನೂ ಇಲ್ಲ. ಅವರ ಹೇಸರು ಕೇಳಿ ಬರುತ್ತಿರುವುದು ಸರಿಯಲ್ಲ. ಜೋಶಿ ಅವರು ಒಳ್ಳೆಯವರು, ಪಾಪದ ವ್ಯಕ್ತಿ. ಅವರನ್ನು ಭೇಟಿಯಾಗಲು ಆಗಿಲ್ಲ. ಈ ಪ್ರಕರಣದಲ್ಲಿ ಅವರ ಪಾತ್ರವೇನೂ ಇಲ್ಲ. ಅವರ ಹೆಸರನ್ನು ಗೋಪಾಲ ಜೋಶಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net