ಚಿಕ್ಕತಿರುಪತಿ ದೇಗುಲ ವ್ಯವಸ್ಥಾಪನಾ ಸಮಿತಿಗೆ ಗೋಪಾಲ್​ ಅಧ್ಯಕ್ಷ

Published on

ಲಕ್ಕೂರು: ಮುಜರಾಯಿ ಇಲಾಖೆಗೆ ಒಳಪಟ್ಟ ಪ್ರಸಿದ್ಧ ಯಾತ್ರಾಸ್ಥಳ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರಾಗಿ ಆಲಂಬಾಡಿ ಎಂ.ಗೋಪಾಲ್​ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಅನ್ನದಾಸೋಹ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಹೆಸರನ್ನು ಘೋಷಿಸಿ ಮಾತನಾಡಿದ ಅವರು, ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯಿಂದ ಸದಸ್ಯರನ್ನು ಆಯ್ಕೆ ಮಾಡಿ ಒಂದು ವರ್ಷವಾಗಿದ್ದು, ಇದುವರೆಗೂ ಅಧ್ಯಕ್ಷರನ್ನು ಆಯ್ಕೆ ಮಾಡಿರಲಿಲ್ಲ. ದೇವಾಲಯದ ಆಡಳಿತ ವ್ಯವಸ್ಥೆ ಅಭಿವೃದ್ಧಿಪಡಿಸುವ ಹಿನ್ನೆಲೆ ಉಳಿದ 2 ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರನ್ನು ಸಮಿತಿಯ ಸದಸ್ಯರು, ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸರ್ವಾನುಮತದ ರ್ನಿಣಯದಂತೆ ಆಯ್ಕೆ ಮಾಡಲಾಗಿದೆ ಎಂದರು.

ಗುಂಡುರಾವ್​ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ದೇವಸ್ಥಾನಕ್ಕೆ ಮುಸ್ಲಿಂ ಧರ್ಮದವರನ್ನು ಮೊದಲ ಬಾರಿಗೆ ವ್ಯವಸ್ಥಾಪನ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿತ್ತು. ಸುಮಾರು ದಶಕಗಳು ಕಳೆದ ನಂತರ ಕಾಂಗ್ರೆಸ್​ ಅವಧಿಯಲ್ಲಿಯೇ ಪ್ರಸ್ತುತ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಎಂದರು.

ಸಮಿತಿ ಸದಸ್ಯೆ ತೇಜಸ್ವಿನಿ ಹರೀಶ್​ ಮಾತನಾಡಿ, ದೇವಾಲಯದ ಆವರಣದಲ್ಲಿ ಭಕ್ತಾಧಿಗಳಿಗೆ ಸೂಕ್ತ ಮೂಲ ಸೌಕರ್ಯವಾದ ಶೌಚಗೃಹ ಹಾಗೂ ಸ್ನಾನದ ಕೊಠಡಿ ನಿರ್ಮಿಸಬೇಕು. ಸರತಿ ಸಾಲನ್ನು ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು. ಪ್ರತಿದಿನ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅಡುಗೆ ಮನೆಯನ್ನು ಮೇಲ್ದರ್ಜೇಗೇರಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಚಿಕ್ಕತಿರುಪತಿ ಗ್ರಾಪಂ ಅಧ್ಯಕ್ಷ ಕುಮಾರ್​, ಉಪಾಧ್ಯಕ್ಷೆ ಗಾಯತ್ರಿ, ದರಖಾಸ್ತು ಸಮಿತಿಯ ಸದಸ್ಯರಾದ ಎಟ್ಟಕೋಡಿ ವೀರಭದ್ರಪ್ಪ, ಮಾಜಿ ತಾಪಂ ಸದಸ್ಯ ವಿ.ನಾಗೇಶ್​, ಚಿಕ್ಕತಿರುಪತಿ ಗ್ರಾಪಂ ಸದಸ್ಯರಾದ ರಾಮ್​ ಪ್ರಸಾದ್​, ರಾಘವೇಂದ್ರ ಪ್ರಸಾದ್​, ರಾಜಶೇಖರ್​, ಜಿ.ವಿ.ಮಂಜುನಾಥ್​, ವೆಂಕಟಪ್ಪ, ಬಾಬು, ಮುಖಂಡರಾದ ಶಶಿಧರ್​, ಸಂತೋಷ್​ಕುಮಾರ್​, ಸೊಣ್ಣೂರು ಗೋವಿಂದ್​, ರಾಜಪ್ಪ, ಮುನಿರಾಜು, ಅಹನ್ಯ ಶಂಕರ್​, ಆಲಂಬಾಡಿ ತಿಪ್ಪಣ್ಣ,ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಟಿ.ಸೆಲ್ವಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net