

ಹುಬ್ಬಳ್ಳಿ: ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ನಾಲ್ವರು ವಿರುದ್ಧ ಗೂಂಡಾ ಕಾಯ್ದೆ ಹಾಗೂ 31 ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಕ ಅಪರಾಧ, ಕಳ್ಳಭಟ್ಟಿ ವ್ಯಾಪಾರ, ಅನೈತಿಕ ವ್ಯವಹಾರ ಹಾಗೂ ಭೂ ಕಬಳಿಕೆಯಲ್ಲಿ ತೊಡಗಿದ್ದ ಆರೋಪದಡಿ ಗೂಂಡಾ ಕಾಯ್ದೆ ದಾಖಲಿಸಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಗರ ಲಕ್ಕುಂಡಿಯನ್ನು ಧಾರವಾಡ ಕಾರಾಗೃಹ, ಕೇಶ್ವಾಪುರ ಠಾಣೆ ವ್ಯಾಪ್ತಿಯ ಮಂಜುನಾಥ ಭಂಡಾರಿ ಅಲಿಯಾಸ್ ಸೈಂಟಿಸ್ಟ್ ಮಂಜ್ಯಾನನ್ನು ಕಲಬುರ್ಗಿ, ಶಹರ ಠಾಣೆ ವ್ಯಾಪ್ತಿಯ ದಾವೂದ್ ನದಾಫ್‌ನನ್ನು ಮೈಸೂರು ಹಾಗೂ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಣ ಗಭ್ಯಾ ಎಂಬುವನನ್ನು ಬಳ್ಳಾರಿಯ ಕಾರಾಗೃಹಕ್ಕೆ ಅಟ್ಟಲಾಗಿದೆ ಎಂದರು.
ಹಲವು ಅಪರಾಧ ಚಟುವಟಿಕೆಗಲ್ಲಿ ಭಾಗಿಯಾಗಿದ್ದ ಧಾರವಾಡದ ಸಮೀರ್ ಅಹ್ಮದ ಚೋರಮ್ಮನವರ, ಅರ್ಬಾಜ್ ದೊಡ್ಡಮನಿ, ಮೈನು ಇರಾನಿ, ಮೊಹಮ್ಮದ ಇರಾನಿ, ಹುಬ್ಬಳ್ಳಿಯ ಕಾರ್ತಿಕ ಲೇಸಪ್ಪನವರ, ನಾಗರಾಜ ಕೊರವರ, ಕ್ರಿಸ್ತಾನಂದ ಕನವಳ್ಳಿ, ಅಫ್ತಾರ್ ಹುಸೇನ್, ವಿಶಾಲ ಜಾಧವ, ಕಿರಣ ಬಡಿಗೇರ, ಡೇವಿಡ್ ಯಾಮಾರ್ತಿ, ಸಾಹಿಲ್ ಛಡ್ಡಾ, ಅಸ್ಲಂ ಬೇಪಾರಿ, ರಸೂಲಖಾನ್ ಬಾಗಲಕೋಟ, ಜಿಲಾನಿ ಕೊರಪಾಲಿ, ಗಣೇಶ ಗೊಲ್ಲರ, ಸಂದೀಪ ಸಾಳುಂಕೆ, ಪುರ್ಖಾನ್ ಪಠಾಣ, ಮಹೇಶ ಕುಲಕರ್ಣಿ, ಗಣಪತಿ ಅಥಣಿ, ಮಹಾದೇವ ಬೆಂಕಿ, ದೀಪಕ ಕ್ಯಾರಕಟ್ಟಿ, ರಾಜೇಶ ಶಿವಳ್ಳಿ, ಪವನ ಗಬ್ಬೂರ, ಆವೇಜ್ ಬೇಪಾರಿ, ಬಾಬಾನವಾಜ್ ಗದಗವಾಲೆ, ಇಲ್ಹಾನ್ ಬಿಸ್ತಿ, ನಿಖಿಲ್ ಬಡಶೆಟ್ಟಿ, ಸುರೇಶ ಹರಕೇರಿ, ಸ್ಯಾಮುವೆಲ್ ಪೋಪಟೆ ಹಾಗೂ ಅನ್ವರ ಬ್ಯಾಹಟ್ಟಿ ಎಂಬಾತನನ್ನು ಗಡಿಪಾರು ಮಾಡಲಾಗಿದೆ ಎಂದರು.
ಆಯುಕ್ತಾಲಯ ವ್ಯಾಪ್ತಿಯಲ್ಲಿ 1700ಕ್ಕೂ ಹೆಚ್ಚು ರೌಡಿಶೀಟರ್‌ಗಳಿದ್ದಾರೆ. ಅದರಲ್ಲಿ ಈ ಹಿಂದೆ 52 ಆರೋಪಿಗಳನ್ನು ಗಡಿಪಾರು ಮಾಡಲಾಗಿತ್ತು. ಈಗ 31 ಜನ ಸೇರಿ ಒಟ್ಟು 83 ಜನರನ್ನು ಗಡಿಪಾರು ಮಾಡಲಾಗಿದೆ. ಇನ್ನೂ ಅನೇಕರ ಪಟ್ಟಿ ತಯಾರಿಸಲಾಗುತ್ತಿದೆ. ಮೂರನೇ ಹಂತದಲ್ಲಿ ಇನ್ನಷ್ಟು ಆರೋಪಿಗಳನ್ನು ಗಡಿಪಾರು ಮಾಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರ ಸಹಕಾರವಿಲ್ಲದೇ ಪೊಲೀಸರೂ ಅಸಹಾಯಕರು. ಹೀಗಾಗಿ ತಮ್ಮ ಸುತ್ತಮುತ್ತ ನಡೆಯುವ ಅಕ್ರಮ ಚಟುವಟಿಕೆ, ರೌಡಿ ವರ್ತನೆ ಹಾಗೂ ಸಮಾಜ ಘಾತುಕ ಶಕ್ತಿಗಳ ಕುರಿತು ಸಾರ್ವಜನಿಕರು ಮುಕ್ತವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ. ಮಾಹಿತಿ ನೀಡಿದವರು ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಶಶಿಕುಮಾರ ತಿಳಿಸಿದರು.
ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ರವೀಶ ಸಿ.ಆರ್., ಎಸಿಪಿಗಳಾದ ಶಿವಪ್ರಕಾಶ ನಾಯಕ್, ಉಮೇಶ ಚಿಕ್ಕಮಠ, ವಿಜಯಕುಮಾರ ತಳವಾರ ಸೇರಿದಂತೆ ಅನೇಕರಿದ್ದರು.