

ಐಮಂಗಲ: ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸಂಪೂರ್ಣ ಸೌಲಭ್ಯ ತಲುಪಿಸುವ ಹೊಣೆಗಾರಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ವಹಿಸಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆ ನೂತನ ಸಚಿವ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ಹೋಬಳಿಯ ಗೂಯಿಲಾಳು ಟೋಲ್ ಬಳಿ ನಿರ್ಮಾಣವಾಗುತ್ತಿರುವ ಗುಹಾಂತರ ಮಾದರಿಯ 30 ಅಡಿ ಎತ್ತರದ ಸಾಯಿಬಾಬಾ ಮಂದಿರಕ್ಕೆ ಈಚೆಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದರು.
ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಚಿವರಾಗಿ ಕೆಲಸ ಮಾಡಿರುವ ಹಿರಿಯರ ಅನುಭವ ಪಡೆದು ಉತ್ತಮ ಕೆಲಸ ಮಾಡುವ ಗುರಿ ಹೊಂದಿದ್ದೇನೆ ಎಂದರು.
ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ಸಂಪೂರ್ಣ ತಲುಪುತ್ತಿಲ್ಲ ಎಂಬ ಬೇಸರ ಮುಖ್ಯಮಂತ್ರಿ ಅವರಲ್ಲಿದೆ. ಅದನ್ನು ಸರಿಪಡಿಸುವ ದೊಡ್ಡ ಹೊಣೆಗಾರಿಕೆ ನನಗೆ ನೀಡಿದ್ದಾರೆ ಎಂದು ತಿಳಿಸಿದರು.
ಎಂಎಲ್ಸಿ ಹಾಗೂ ವಿಧಾನಸಭೆ ಉಪ ಚುನಾವಣೆ ನಂತರ ಎಸ್ಸಿ, ಎಸ್ಟಿ ಸಮುದಾಯದ ಸಮಗ್ರ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಈಗಾಗಲೇ ಕಡಿತಗೊಂಡಿರುವ ಸ್ವಯಂ ಉದ್ಯೋಗ ಕೈಗೊಳ್ಳಲು 5 ಲಕ್ಷ ರೂ. ಸಹಾಯಧನ ನೀಡುವ ಸೌಲಭ್ಯವನ್ನು ಮರು ಜಾರಿಗೆ ತರುತ್ತೇನೆ ಎಂದು ಹೇಳಿದರು.
ಗುರುಸ್ವಾಮಿ ಗುರೂಜಿ, ಜಿಪಂ ಸದಸ್ಯೆ ಟಿ.ಆರ್.ರಾಜೇಶ್ವರಿ, ಸಚಿವರ ಆಪ್ತಸಹಾಯ ಪಾಪೇಶ್ ನಾಯಕ, ಹನುಮಂತರಾಯಪ್ಪ, ಪಾಲಯ್ಯ ಮತ್ತಿತರರಿದ್ದರು.