

ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ಚಂದಿರನ ಗೃಹವನ್ನು ಅತ್ಯಂತ ಯಶಸ್ವಿಯಾಗಿ ಪ್ರವೇಶಿಸಿದ ‘ವಿಕ್ರಂ ಲ್ಯಾಂಡರ್’ ವಿಶ್ವವನ್ನೇ ಬೆರಗುಗೊಳಿಸಿ, ಸರ್ವರೂ ಭಾರತದತ್ತ ನೋಡುವಂತೆ ಮಾಡಿದ ಆ. 23 ರಾಷ್ಟ್ರದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಸುದಿನವಾಗಿದ್ದು, ಇದೀಗ ಗೂಗಲ್ ಅತ್ಯಂತ ಪ್ರೀತಿಯಿಂದ ಗೌರವ ಸಮರ್ಪಿಸಿದೆ.
ಬಿಳಿ ಶಶಿಯೊಳಗೆ ಪ್ರೀತಿಯ ಸಂಕೇತದೊಂದಿಗೆ ಲ್ಯಾಂಡರ್ ಕೆಳಗಿಳಿಯುವ ಮಾದರಿಯ ಚಿತ್ರವನ್ನು ಪ್ರಕಟಿಸುವ ಮೂಲಕ ಗಮನ ಸೆಳೆದಿದ್ದು, ನೋಡಲು ಆಕರ್ಷಣೀಯವಾಗಿದೆ.
ಇನ್ನು ಚಂದ್ರಯಾನ-3ಗೂ ಕೋಟೆನಾಡಿಗೂ ಅವಿನಾಭಾವ ಸಂಬಂಧವಿದ್ದು, ಚಂದ್ರನ ಅಂಗಳಕ್ಕೆ ಲ್ಯಾಂಡರ್ ಇಳಿಸುವ ತರಬೇತಿ 2017ರಲ್ಲೇ ಜಿಲ್ಲೆಯಲ್ಲಿ ನಡೆದಿತ್ತು ಎಂಬುದು ಕೂಡ ಈ ಭಾಗದ ಜನರಿಗೆ ಅತ್ಯಂತ ಸಂತಸ ಮತ್ತು ಹೆಮ್ಮೆಯ ಸಂಗತಿ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಸಮೀಪ ಅಂದಾಜು 473 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿದ್ದು, ಅನೇಕ ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿ ದೇಶದ ಕೀರ್ತಿ ಬೆಳಗಿಸಲು ಹಗಲಿರುಳು ಶ್ರಮಿಸುತ್ತಿದೆ.
ತಮಿಳುನಾಡಿನ ಸೇಲಂನಿಂದ ಮಣ್ಣನ್ನು ಆಮದು ಮಾಡಿಕೊಂಡು ಭೂಮಿಯ ಮೇಲೆಲ್ಲ ಹರಡುವುದರೊಂದಿಗೆ ಹದಗೊಳಿಸಿ, ವಿವಿಧ ಅಳತೆಯ 9 ಕುಳಿಗಳನ್ನು ಸೃಷ್ಟಿಸಿ ಇದೇ ಸ್ಥಳದಲ್ಲೇ ಚಂದ್ರನ ಮೇಲ್ಮೈ ಹೋಲುವ ಮಾದರಿ ತಯಾರಿಸಲಾಗಿತ್ತು. ನಂತರ ಅದರೊಳಗೆ ಲ್ಯಾಂಡರ್‌ವೊಂದನ್ನು ಯಶಸ್ವಿಯಾಗಿ ಇಳಿಸುವ ಮೂಲಕ ಕಿರಿದಾದ ರೋವರ್ ಓಡಾಡಿಸುವಲ್ಲಿ ಇಸ್ರೋ ವಿಜ್ಞಾನಿಗಳು ಸಫಲರಾಗಿದ್ದರು.
ಸಾಮಾನ್ಯವಾಗಿ ಚಂದ್ರನ ಮೇಲ್ಮೈ ಧೂಳಿನಿಂದ ಆವೃತವಾದ ಹಲವು ಕುಳಿಗಳಿಂದ ಕೂಡಿರುತ್ತದೆ. ಹೀಗಾಗಿ ನೌಕೆ ಇಳಿಸುವಾಗ ಚಕ್ರಗಳು ಅದರೊಳಗೆ ಸಿಲುಕದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸ. ಆ ವೇಳೆ ಎದುರಾಗಬಹುದಾದ ಸಮಸ್ಯೆ ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳಲು 2.5 ಅಡಿ ಎತ್ತರದಷ್ಟು ಸೃಷ್ಟಿಸಿದ್ದ ಮಾದರಿ ಹೊಸದಾಗಿ ಇಸ್ರೋ ಸೇರ್ಪಡೆಯಾಗಿದ್ದ ವಿಜ್ಞಾನಿಗಳ ಗಮನ ಸೆಳೆದಿತ್ತು.
ಭಾರತದ ಮಹತ್ವಾಕಾಂಕ್ಷೆಯ ಸಂಪೂರ್ಣ ಸ್ವದೇಶಿ ನಿರ್ಮಿತ ಚಂದ್ರಯಾನ-3 ಮೈಲಿಗಲ್ಲು ಸೃಷ್ಟಿಸಿ ದಕ್ಷಿಣ ಧ್ರುವಕ್ಕೆ ನೌಕೆ ಇಳಿಸಿದ ಮೊಟ್ಟಮೊದಲ ದೇಶ ಎಂಬ ಐತಿಹಾಸಿಕ ದಾಖಲೆ ಬರೆದಿದ್ದು, ವಿಶ್ವ ನಿಬ್ಬೆರಗಾಗುವಂತೆ ಮಾಡಿದೆ. ಇದಕ್ಕೆ ಪೂರಕವಾಗಿ ಮಾದರಿಯೊಂದಿಗೆ ತರಬೇತಿ ನೀಡಿದ್ದು ಚಿತ್ರದುರ್ಗ ಎಂಬುದೇ ಕೋಟೆನಾಡಿನ ಜನರಿಗೆ ಸಂತಸದ ವಿಚಾರ.
ಹೆಚ್ಚಾದ ಕೋಟೆನಾಡಿನ ಘನತೆ: ಸತತ ನಾಲ್ಕು ವರ್ಷದ ಈ ಸಾಧನೆಗೆ ದೇಶದ ಎಲ್ಲಾ ರಾಜ್ಯಗಳ ಸಾವಿರಾರು ವಿಜ್ಞಾನಿಗಳ ಅವಿರತ ಶ್ರಮ ಅಡಗಿದ್ದು, ವಿಕ್ರಮರಾಗಿ ವಿಶ್ವದ ಗಮನ ಸೆಳೆದಿದ್ದಾರೆ. ಅದರಲ್ಲಿ ಚಿತ್ರದುರ್ಗದ ಕೆಲವರು ಇದ್ದಾರೆ ಎಂಬ ಸಂಗತಿ ಕೋಟೆನಾಡಿನ ಘನತೆ ಹೆಚ್ಚಿಸಿದೆ.
ಜೆಸಿಆರ್ ಬಡಾವಣೆ ನಿವಾಸಿ ವರದರಾಜ್-ಮೇನಕಾ ದಂಪತಿ ಪುತ್ರ ರಮೇಶ್ ವಿ. ನಾಯ್ಡು ಕೂಡ ಒಬ್ಬರು. ಸದ್ಯ ಇಸ್ರೋ ಗುಂಪಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಜೆಎಂಐಟಿ ಕಾಲೇಜಿನ 1987-91ರ ಬ್ಯಾಚ್‌ನ ಇಂಜಿನಿಯರಿಂಗ್ ವಿದ್ಯಾರ್ಥಿ. ವಿಜ್ಞಾನದಲ್ಲಿ ಅವರಿಗಿದ್ದ ಆಸಕ್ತಿಯಿಂದಾಗಿ ಆ ಕ್ಷೇತ್ರ ಆಯ್ಕೆ ಮಾಡಿಕೊಂಡರು ಎಂದು ಕುಚಿಕು ಗೆಳೆಯನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಆಪ್ತಮಿತ್ರ ರಾಜೇಶ್.
ಗ್ರಾಮೀಣ ಪ್ರತಿಭೆ: ಪ್ರಸ್ತುತ ಇಸ್ರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೋವಿಂದರಾಜ್ ಶೆಟ್ರು ಕೂಡ ಜೆಎಂಐಟಿ ಇಂಜಿನಿಯರಿಂಗ್ ವಿದ್ಯಾರ್ಥಿ. ಮೂಲತಃ ಕೊಟ್ಟೂರು ತಾಲೂಕಿನ ತೂಲಹಳ್ಳಿಯವರು. ಸಿರಿಗೆರೆ ಬೃಹನ್ಮಠದ ತರಳಬಾಳು ಸಿದ್ದೇಶ್ವರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಹೈಸ್ಕೂಲ್‌ವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ. ಚಂದ್ರಯಾನ-3ರ ಗುಂಪಿನಲ್ಲಿದ್ದು, ಅದರ ಸಫಲತೆಗಾಗಿ ಅನೇಕ ವಿಜ್ಞಾನಿಗಳಂತೆ ಇವರು ಶ್ರಮಿಸಿದ್ದಾರೆ ಎಂಬುದು ಅತ್ಯಂತ ಹೆಮ್ಮೆಯ ವಿಚಾರ ಎಂದು ನಾಗರಾಜ್ ಸಿರಿಗೆರೆ ಹರ್ಷ ವ್ಯಕ್ತಪಡಿಸಿದ್ದಾರೆ.
ಯಾವ್ಯಾವ ವೇಳೆ ನೌಕೆ ಕಳಿಸಲಾಗಿತ್ತು
ದೇಶ ಹೆಸರು ಲಾಂಚ್‌ಗೆ ಪ್ರಯತ್ನ
ಚೀನಾ ಚೇಂಜ್-5 2017
ಚೀನಾ ಚೇಂಜ್-4 2018
ಭಾರತ ಚಂದ್ರಯಾನ-2 2018
ಅಮೆರಿಕ ಲೂನಾರ್ ಫ್ಲಾೃಷ್ ಲೈಟ್ 2018
ಅಮೆರಿಕ ಲೂನಾರ್ ಐಸ್‌ಕ್ಯೂಬ್ 2018
ಅಮೆರಿಕ ಲೂನಾರ್ ಮ್ಯಾಪ್ 2018
ಜಪಾನ್ ಸೆಲೇನ್-2 2018-19