

ಮಂಡ್ಯ: ಸೀಟ್ ಬೆಲ್ಟ್ ಧರಿಸದೇ 36 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಗೂಡ್ಸ್ ವಾಹನ ಚಾಲಕನಿಗೆ ಮಂಡ್ಯದ ಸಂಚಾರ ಪೊಲೀಸರು ಬರೋಬ್ಬರಿ 18 ಸಾವಿರ ರೂ ದಂಡ ವಿಧಿಸಿದ್ದಾರೆ.
ಮೈಸೂರಿನ ಹೆಬ್ಬಾಳದಿಂದ ಬೆಂಗಳೂರಿಗೆ ಗೂಡ್ಸ್ ವಾಹನದಲ್ಲಿ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಲಾಗುತ್ತಿತ್ತು. ಈ ವಾಹನದ ಚಾಲಕ ಪ್ರತಿ ಬಾರಿಯೂ ಸೀಟ್ ಬೆಲ್ಟ್ ಧರಿಸದೇ ಇರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆಟೋ ಚಾಲಕನನ್ನು ವಾಹನ ಸಮೇತ ಹಿಡಿದು ಮಂಡ್ಯ ಸಂಚಾರ ಠಾಣೆ ನಿರೀಕ್ಷಕ ಸಂತೋಷ್ ದಂಡ ವಸೂಲಿ ಮಾಡಿದ್ದಾರೆ. ಒಂದು ಬಾರಿ ಉಲ್ಲಂಘನೆಗೆ 500 ರೂ.ನಂತೆ 36 ಸಲ ನಿಯಮ ಮುರಿದಿರುವ ಕಾರಣಕ್ಕೆ 18 ಸಾವಿರ ದಂಡ ಹಾಕಲಾಗಿದೆ. ಚಾಲಕ ದಂಡ ಪಾವತಿಸಿ ರಸೀದಿ ಪಡೆದಿದ್ದಾನೆ. ಮತ್ತೆ ಇಂತಹ ತಪ್ಪು ಮಾಡದಂತೆ ಎಚ್ಚರಿಕೆ ನೀಡಿ, ಸಂಚಾರ ನಿಯಮ ಪಾಲಿಸುವಂತೆ ತಿಳವಳಿಕೆ ನೀಡಲಾಗಿದೆ.