

ಗುಂಡ್ಲುಪೇಟೆ: ಕೇರಳಕ್ಕೆ ದ್ರಾಕ್ಷಿ ಹಣ್ಣು ಸರಬರಾಜು ಮಾಡಿ ವಾಪಸಾಗುತ್ತಿದ್ದ ಪಿಕಪ್ ಗೂಡ್ಸ್ ವಾಹನವು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ.
ಸೋಮವಾರ ಕೇರಳದಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಅರಣ್ಯ ಪ್ರದೇಶದ ಮಾರ್ಗವಾಗಿ ವಾಪಸಾಗುತ್ತಿದ್ದ ಗೂಡ್ಸ್ ವಾಹನ ಮದ್ದೂರು ಚೆಕ್‌ಪೋಸ್ಟ್ ಸಮೀಪ ಸಾಗುವಾಗ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ವಾಹನವನ್ನು ನಿಲ್ಲಿಸಿ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ವಾಹನ ಬರುವ ವೇಳೆಗೆ ವ್ಯಾಪಿಸಿದ ಬೆಂಕಿಯಿಂದ ಪಿಕಪ್ ಗೂಡ್ಸ್ ವಾಹನ ಸಂಪೂರ್ಣ ಸುಟ್ಟುಹೋಗಿದೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಪ್ಪಿದ ಅನಾಹುತ: ಮೂಲೆಹೊಳೆ ಮಾರ್ಗವಾಗಿ 22 ಕಿಲೋ ಮೀಟರ್ ಅರಣ್ಯ ಪ್ರದೇಶದಲ್ಲಿ ಸಾಗಿದ ಪಿಕಪ್ ಗೂಡ್ಸ್ ವಾಹನ ಮದ್ದೂರು ಚೆಕ್‌ಪೋಸ್ಟ್ ದಾಟುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಆಕಸ್ಮಾತ್ ಕೆಲವೇ ನಿಮಿಷಗಳ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದರೆ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.