ಸರಕು ಸಾಗಣೆ ವಾಹನಗಳ ಮಾಲೀಕರಿಂದ ಪ್ರತಿಭಟನೆ

lorry ass
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಭಾರತೀಯ ನ್ಯಾಯ ಸಂಹಿತೆಯಡಿ ಹಿಟ್ ಆಂಡ್ ರನ್ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸುವ ಕಾನೂನು ಹಿಂಪಡೆಯಬೇಕೆಂದು ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ಸರಕು ಸಾಗಣೆ ಮತ್ತು ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದವು.

ದುರ್ಗದಬೈಲ್ ವೃತ್ತದಿಂದ ಪ್ರತಿಭಟನೆ ಆರಂಭಿಸಿ, ಮಿನಿ ವಿಧಾನಸೌಧಕ್ಕೆ ಆಗಮಿಸಿದ ಪ್ರತಿಭಟನಾಕಾರರು ತಹಸೀಲ್ದಾರ ಮೂಲಕ ರಾಷ್ಟ್ರಪತಿಯವರಿಗೆ ಬರೆದ ಮನವಿ ಸಲ್ಲಿಸಿದರು.

ಹಿಟ್ ಆಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ 7 ಲಕ್ಷ ರೂ. ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಪಡಿಸುವ ಕರಾಳ ಶಾಸನವನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಮಾಡಲಾಗಿದೆ. ಕಡಿಮೆ ಸಂಬಳದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ದಂಡ ಕಟ್ಟಲು ಚಾಲಕನಿಗೆ ಸಾಧ್ಯವಿಲ್ಲ. ಈ ವಿಧೇಯಕಕ್ಕೆ ತಿದ್ದುಪಡಿ ತಂದು ಮೊದಲಿನಂತೆ ಕಾನೂನು ತರಬೇಕು ಎಂದು ಆಗ್ರಹಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸರಕು ಸಾಗಣೆ ಮತ್ತು ಲಾರಿ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ರವೀಂದ್ರ ಬೆಳಮಕರ ಮಾತನಾಡಿ, ಈ ಕರಾಳ ಶಾಸನವು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಹಾಗೂ ಎಲ್ಲ ಭಾರೀ ವಾಹನಗಳಿಗೆ ಅನ್ವಯವಾಗುತ್ತದೆ. ಇದಕ್ಕೆ ನಮ್ಮ ಪ್ರತಿರೋಧವಿದೆ. ಕೇಂದ್ರ ಸರ್ಕಾರ ಇದನ್ನು ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ಜ. 17ರಿಂದ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಇಂದು ಪ್ರತಿಭಟನೆ ನಡೆಸಿ ಹುಬ್ಬಳ್ಳಿಯ ಅಕ್ಕಿಹೊಂಡ, ಹಿರೇಪೇಟ, ಇನ್ನಿತರ ಕಡೆ ಗೂಡ್ಸ್ ಟ್ರಾನ್ಸ್​ಪೋರ್ಟ್ ಕಚೇರಿಗಳನ್ನು ಬಂದ್ ಮಾಡಿದ್ದೇವೆ. ಹೊರ ರಾಜ್ಯದ ಲಾರಿಗಳಿಗೂ ಮುಷ್ಕರಕ್ಕೆ ಬೆಂಬಲ ನೀಡುವಂತೆ ಕೋರಿದ್ದೇವೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಮಿನಿ ಗೂಡ್ಸ್ ವಾಹನ ಚಾಲಕರ-ಮಾಲೀಕರ ಸಂಘ, ಧಾರವಾಡ ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘ, ಇನ್ನಿತರ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದ್ದವು. ರಾಜಶೇಖರ ಮೆಣಸಿನಕಾಯಿ, ಸುನೀತಾ ಹುರಕಡ್ಲಿ, ಬಿ.ಎ. ಮುಧೋಳ, ರಮೇಶ ಬೋಸಲೆ, ಯೂಸುಫ್ ಬಳ್ಳಾರಿ, ಬಾಬಾಜಾನ ಮುಧೋಳ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net