ಗೂಡ್ಸ್ ಆಟೋ ಮಗುಚಿ ಇಬ್ಬರಿಗೆ ಗಾಯ

03 HANUR 1 A
Published on

ಹನೂರು: ಹುಲುಸುಗುಡ್ಡೆ-ಆರ್.ಎಸ್.ದೊಡ್ಡಿ ಮಾರ್ಗಮಧ್ಯದಲ್ಲಿ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಗೂಡ್ಸ್ ಆಟೋ ಮಗುಚಿ ಬಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಪಟ್ಟಣದ ನಾಗೇಂದ್ರ ಹಾಗೂ ಚಾಲಕ ಮಾಣಿಕ್ಯ ಗಾಯಗೊಂಡವರು. ಇವರು ಶುಕ್ರವಾರ ಬೆಳಗ್ಗೆ 11.30ರಲ್ಲಿ ಕೊಳ್ಳೇಗಾಲದಿಂದ ಗೂಡ್ಸ್ ಆಟೋದಲ್ಲಿ ತರಕಾರಿ ತುಂಬಿಕೊಂಡು ಹನೂರಿಗೆ ಬರುತ್ತಿದ್ದರು. ಈ ವೇಳೆ ಹುಲುಸುಗುಡ್ಡೆ ಬಳಿ ರಸ್ತೆಗೆ ಅಡ್ಡಲಾಗಿ ಬಂದ ಹಾವನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿದ ಆಟೋ ಮಗುಚಿ ಬಿದ್ದಿದೆ. ಇದರಿಂದ ಇಬ್ಬರೂ ಗಾಯಗೊಂಡರು.

ಸಾರ್ವಜನಿಕರಿಂದ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರನ್ನೂ ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಕೊಳ್ಳೇಗಾಲದ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.
ಆಸ್ಪತ್ರೆ ಮೇಲ್ದರ್ಜೆಗೇರಿಸಿ: ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಗ ಅಲ್ಲಿನ ವೈದ್ಯರು ಅನ್ಯ ಕಾರ್ಯ ನಿಮಿತ್ತ ಬೇರೆಡೆಗೆ ತೆರಳಿದ್ದರಿಂದ ಶುಶ್ರೂಷಕಿಯರು ಪ್ರಥಮ ಚಿಕಿತ್ಸೆ ನೀಡಬೇಕಾಯಿತು. ಸಿಬ್ಬಂದಿ ಸಹಿತ ಹಲವು ಸೌಲಭ್ಯ ವಂಚಿತ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net