

ಕನಕಗಿರಿ:ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಹೆಚ್ಚಿಸುವ ನಿಟ್ಟಿನಲ್ಲಿ ಪ್ರವೇಶಾತಿ ಅಭಿಯಾನ ನಡೆಸಲಾಗುತ್ತಿದೆ ಎಂದು ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಬಜರಂಗಬಲಿ ಹೇಳಿದರು.
ಇಲ್ಲಿನ ಕೆಪಿಎಸ್ ಪಿಯು ವಿಭಾಗದಲ್ಲಿ ಬುಧವಾರ ಪಿಯುಸಿ ಬಳಿಕ ಪದವಿ ಅಧ್ಯಯನಕ್ಕಾಗಿ ಕಾಲೇಜುಗಳಿಗೆ ಪ್ರವೇಶ ಹೆಚ್ಚಿಸಲು ನಡೆಯುತ್ತಿರುವ ಅಭಿಯಾನದಲ್ಲಿ ಮಾತನಾಡಿದರು.
ಕನಕಗಿರಿ ಪದವಿ ಕಾಲೇಜಿನಲ್ಲಿ ಬಿ.ಎ. (ಪತ್ರಿಕೋದ್ಯಮ), ಬಿ.ಕಾಂ, ಬಿ.ಎಸ್ಸಿ ಪದವಿ ಕೋರ್ಸ್‌ಗಳು ಲಭ್ಯವಿದ್ದು, ಎಲ್ಲ ರೀತಿಯ ಮೂಲ ಸೌಕರ್ಯಗಳೊಂದಿಗೆ ಅನುಭವಿ ಮತ್ತು ನುರಿತ ಪ್ರಾಧ್ಯಾಪಕರನ್ನು ಹೊಂದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಪದವಿ ಕಾಲೇಜುಗಳ ಪೈಕಿ ಇಲ್ಲಿನ ಕಾಲೇಜು ತ್ವರಿತಗತಿಯಲ್ಲಿ ಪ್ರಗತಿ ಹೊಂದುತ್ತಿದೆ. ಪಟ್ಟಣದ ಸುತ್ತಲಿನ ಗ್ರಾಮಗಳಲ್ಲಿರುವ ಪಿಯುಸಿ ಕಾಲೇಜುಗಳಿಗೆ ಭೇಟಿ ನೀಡಿ ಪ್ರಚಾರ ಮಾಡಲಾಗುತ್ತಿದ್ದು, ಸರ್ಕಾರಿ ಕಾಲೇಜುಗಳಲ್ಲಿ ದೊರೆಯುವ ಸೌಲಭ್ಯ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.
ಉಪನ್ಯಾಸಕರಾದ ದೇವೇಂದ್ರಪ್ಪ, ಮಾದಿನಾಳಪ್ಪ, ಶಾಂತಾ, ಟಿ.ಲಕ್ಷ್ಮೀ, ಪ್ರಿಯಾಂಕ, ಸೈಯದ್ ಖಲಿಲುಲ್ಲಾ ಖಾದ್ರಿ ಇತರರಿದ್ದರು.