ಗಾಳಿಬೀಡು ಶಿಕ್ಷಕರಿಗೆ ಬೀಳ್ಕೊಡುಗೆ

23adarshkdga2
Published on

ಮಡಿಕೇರಿ: ಗಾಳಿಬೀಡು ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರ ವತಿಯಿಂದ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.


೧೯೯೫ ರಿಂದ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದ ಮತ್ತು ಗಾಳಿಬೀಡು ಶಾಲಾ ಮಕ್ಕಳ ಹಲವಾರು ಕ್ರೀಡೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ರಮೇಶ್‌ರವರು ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಪರಿಗಣಿಸಿ ರಮೇಶ್‌ರವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಹಾಗೂ ಶಾಲೆಯಲ್ಲಿ ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿದ್ದ ಕರುಣಾ, ತೇಜ ಮತ್ತು ರಶ್ಮಿ ಬೇರೆ ಶಾಲೆಗೆ ವರ್ಗಾವಣೆಗೊಂಡಿದ್ದು, ಇಲ್ಲಿಯವರೆಗಿನ ಸೇವೆಯನ್ನು ಪರಿಗಣಿಸಿ ಶಾಲಾಭಿವೃದ್ಧಿ ಮಂಡಳಿಯಿಂದ ಬೀಳ್ಕೊಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್, ಗಾಳಿಬೀಡು ಶಾಲೆಯಲ್ಲಿ ಮಾಡಿದ ಸೇವೆ ಅದ್ಭುತವಾದ ನೆನಪುಗಳನ್ನು ನನಗೆ ನೀಡಿದೆ. ಮಕ್ಕಳಿಗೆ ಕಲಿಕೆಯ ಜತೆಗೆ ಆಟೋಟಗಳ ಅಗತ್ಯವಿದೆ. ಇಂದಿನ ದಿನಗಳಲ್ಲಿ ಕ್ರೀಡೆಗೆ ಬಹಳ ಪ್ರಾಶಸ್ತ್ಯ ನೀಡಲಾಗುತ್ತಿದೆ. ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಮಹತ್ವದ ಅರಿವನ್ನು ಬೆಳೆಸಬೇಕು ಎಂದರು.


ವರ್ಗಾವಣೆಗೊಂಡ ಇಂಗ್ಲಿಷ್ ಶಿಕ್ಷಕಿ ಕರುಣಾ ಗಾಳಿಬೀಡು ಶಾಲೆಯ ಅನುಭವಗಳನ್ನು ಹಂಚಿಕೊಂಡು, ಶಿಕ್ಷಣ ಮಕ್ಕಳಿಗೆ ಎಷ್ಟು ಮುಖ್ಯವೆಂದು ಮಕ್ಕಳಿಗೆ ಅರಿವು ಮೂಡಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಕಾವೇರಿ, ಪತ್ರಕರ್ತ ಚಂದನ್ ನಂದರಬೆಟ್ಟು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯ ರಾಜ, ಶಿಕ್ಷಕಿ ಸುಮಾ, ಅಡುಗೆ ಸಿಬ್ಬಂದಿಗಳು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net