ಹಳೆಯ ಸ್ಲೋಚ್‌ ಕ್ಯಾಪ್​ಗೆ ಗುಡ್​ ಬೈ; Karnataka Police ತಲೆಗೆ ಪೀಕ್‌ ಕ್ಯಾಪ್‌ ಮುಕುಟ

DKs
Published on

ಬೆಂಗಳೂರು: ಕರ್ನಾಟಕ ಪೊಲೀಸ್ (Karnataka Police)​ ಸಿಬ್ಬಂದಿಗೆ ಈ ಹಿಂದೆ ನೀಡಲಾಗಿದ್ದ ಹಳೆಯ ಸ್ಲೋಚ್‌ ಕ್ಯಾಪ್​ಗೆ ವಿದಾಯ ಹೇಳಿರುವ ಗೃಹ ಇಲಾಖೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ್​ ನೇತೃತ್ವದಲ್ಲಿ ಹೊಸ ಪೀಕ್‌ ಕ್ಯಾಪ್‌ ವಿತರಿಸಲಾಯಿತು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ (ಅ 28) ಪೊಲೀಸ್ ಸಿಬ್ಬಂದಿ ಪೀಕ್ ಕ್ಯಾಪ್ ವಿತರಣೆ ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ಸನ್ಮಿತ್ರ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ನಿಮ್ಮ ಆತ್ಮವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು, ಒಂದು ವೇಳೆ ರಾಜಿ ಮಾಡಿಕೊಂಡರೆ, ಇಡೀ ವ್ಯವಸ್ಥೆಯೆ ಕುಸಿದು ಹೋಗಲಿದೆ ಎಂದರು.

ರಾಜ್ಯದ ನಾಗರಿಕರು ಮತ್ತು ಸರ್ಕಾರ ಪೊಲೀಸರ ಮೇಲೆ ತುಂಬಾ ವಿಶ್ವಾಸ ಇಟ್ಟಿರುತ್ತದೆ. ನೀವೇ ಸಮಾಜದ ರಕ್ಷಕರು. ನಾವು ಪ್ರಮಾಣ ವಚನ ಸ್ವೀಕರಿಸುವ ವೇಳೆ ನಾನು ಸ್ವಲ್ಪ ಖಾರವಾಗಿಯೇ ಮಾತನಾಡಿದ್ದೆ. ಇಂದು ನೀವೆಲ್ಲರೂ ನಿಮ್ಮ ಸಮವಸ್ತ್ರವನ್ನು ಶಿಸ್ತಿನಿಂದ ಧರಿಸಿ, ಆತ್ಮವಿಶ್ವಾಸದಲ್ಲಿ ಕೂತಿದ್ದೀರಿ.

ಕಳೆದ ಸರ್ಕಾರದ ಅವಧಿಯಲ್ಲಿ ಆಯಧಪೂಜೆ ಸಂದರ್ಭ ಕೆಲವರು ವಿಜಯಪುರ ಹಾಗೂ ಉಡುಪಿಯಲ್ಲಿ ಸಮವಸ್ತ್ರ ತೆಗೆದು ಕೇಸರಿ ವಸ್ತ್ರ ಧರಿಸಿದ್ದರು. ರಾಜಕೀಯ ಒತ್ತಡ ಅಥವಾ ಬೇರೆಯವರನ್ನು ಮೆಚ್ಚಿಸಲು ಈ ರೀತಿ ಮಾಡಿದರೆ ನಿಮ್ಮನ್ನು ನೀವೇ ಮಾರಿಕೊಂಡಂತೆ. ಇದರಿಂದಾಗಿ ನಿಮ್ಮ ವ್ಯಕ್ತಿತ್ವ ಮತ್ತು ಇಲಾಖೆಗೆ ಇರುವ ಘನತೆ ನಾಶವಾಗುತ್ತದೆ. ನೀವುಗಳು ರಾಜಕೀಯ ಹಿಂಬಾಲಕರಾಗುತ್ತೀರಿ. ಆಗ ನಿಮ್ಮನ್ನು ಯಾರು ನಂಬುತ್ತಾರೆ? ಎಂದು ಪ್ರಶ್ನಿಸುತ್ತಾ, ಹೀಗಾಗಿ ಈ ರೀತಿಯ ಪದ್ಧತಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ಕಿವಿ ಮಾತು ಹೇಳಿದರು.

ನಮ್ಮ ರಾಜ್ಯದ ಪೊಲೀಸ್ ಸಿಬ್ಬಂದಿ ಯಾವುದರಲ್ಲೂ ಕಡಿಮೆ ಇಲ್ಲ. 1988ರಲ್ಲಿ ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ವಿಶ್ವ ಯುವ ಸಮ್ಮೇಳನಕ್ಕೆ ಉತ್ತರ ಕೊರಿಯಾದ ಪ್ಯೋಂಗ್ಯಾಂಗ್ ಗೆ ತೆರಳಿದ್ದೆ. ಆಗ ಅಲ್ಲಿನ ಪ್ರಮುಖ ವೃತ್ತವೊಂದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಏಕಾಂಗಿಯಾಗಿ ಸಂಚಾರ ದಟ್ಟಣೆಯನ್ನು ನಿಭಾಯಿಸುತ್ತಿದ್ದರು. ನಾನು ಆಕೆಯ ಜೊತೆ ಮಾತನಾಡಿ ನಿಮಗೆ ಸಂಬಳ ಎಷ್ಟು ಎಂದು ಕೇಳಿದೆ. ಆಗ ಆಕೆ ಕೋಪಗೊಂಡು ನಾನು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ಸಂಬಳಕ್ಕಾಗಿ ಅಲ್ಲ ಎಂದು ಹೇಳಿದಳು ಎಂದು ಹಳೆ ನೆನಪನ್ನು ಮೆಲುಕು ಹಾಕಿದರು.

ಗೃಹ ಸಚಿವ ಡಾ. ಜಿ ಪರಮೇಶ್ವರ್ ಜವಾಬ್ದಾರಿ ತೆಗೆದುಕೊಂಡ ಬಳಿಕ ಈ ಇಲಾಖೆ ಹೊಸ ರೂಪ ನೀಡಿರುವುದು ಸಂತೋಷದ ವಿಷಯ. ರಾಜ್ಯ ಸರ್ಕಾರ ನಿಮ್ಮ ಹಿತಕ್ಕಾಗಿ ವಸತಿ ನಿಲಯ, ಸೇವೆ ವೇಳೆ ಮೃತರಾದರೆ ಪರಿಹಾರ, ಸನ್ಮಿತ್ರ ಕಾರ್ಯಕ್ರಮ ತರಲಾಗುತ್ತಿದೆ. ನಿಮಗೆ ನಿಮ್ಮ ಕುಟುಂಬಕ್ಕಾಗಿ ಅನೇಕ ಯೋಜನೆ ತರಲಾಗಿದೆ. ಪೊಲೀಸರ ಮೇಲೆ ಸರ್ಕಾರಕ್ಕೆ ಅಪಾರ ವಿಶ್ವಾಸವಿದ್ದು. ನಿಮ್ಮ ಯಸಸ್ಸಿನಲ್ಲಿ ಸರ್ಕಾರದ ಯಶಸ್ಸು ಅಡಗಿದೆ ಎಂದರು.

ಈ ಹಿಂದೆ ಆರೋಪಿಗಳನ್ನು ಹಿಡಿಯಲು ಓಡುವಾಗ, ಲಾಠಿಪ್ರಹಾರದ ವೇಳೆ ಸ್ಲೋಚ್‌ ಕ್ಯಾಪ್‌ ಕೆಳಗೆ ಬೀಳುತ್ತಿತ್ತು. ಪೊಲೀಸರ ಹ್ಯಾಟ್‌ ಕೆಳಗೆ ಬಿದ್ದರೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಕಳೆದ 4 ದಶಕಗಳಿಂದ ಪೀಕ್‌ ಕ್ಯಾಪ್‌ ನೀಡುವಂತೆ ಪೊಲೀಸರು ಬೇಡಿಕೆಯಿಟ್ಟಿದ್ದರು. ಕೊನೆಗೆ ನಮ್ಮ ಸರ್ಕಾರ ಹೊಸ ಮಾದರಿಯ ಕಡು ನೀಲಿ ಬಣ್ಣದ ಪೀಕ್‌ ಕ್ಯಾಪ್‌ ವಿತರಿಸಲು ಒಪ್ಪಿಗೆ ನೀಡಿತ್ತು. ಹೊಸ ಪೀಕ್‌ ಕ್ಯಾಪ್‌ನಲ್ಲಿ ಎಲಾಸ್ಟಿಕ್‌ ಇರುವುದರಿಂದ ಪೊಲೀಸರ ತಲೆಯಲ್ಲಿ ಸರಿಯಾಗಿ ಕೂರಲಿವೆ. ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್‌ ಸಿಬ್ಬಂದಿಗೆ ಹೊಸ ಪೀಕ್‌ ಕ್ಯಾಪ್‌ ನೀಡುತ್ತಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net