ಸಾವ್‌ಧಾನ್-ವಿಶ್ರಾಮ್ ಕಮಾಂಡ್‌ಗೆ ಗುಡ್‌ಬೈ

Police (4)
Published on

ಬೆಂಗಳೂರು: ಪೊಲೀಸ್ ಪರೇಡ್‌ನಲ್ಲಿ ಅಥವಾ ಗೌರವ ವಂದನೆ ನಡೆಯುವಾಗ ಕೇಳಿಬರುತ್ತಿದ್ದ ಸಾವ್‌ಧಾನ್ ವಿಶ್ರಾಮ್ ಎಂಬ ಕಮಾಂಡ್‌ಗಳನ್ನು ಇನ್ಮುಂದೆ ಕನ್ನಡದಲ್ಲೇ ನೀಡಲು ನಗರ ಪೊಲೀಸರು ಮುಂದಾಗಿದ್ದಾರೆ. ಹಿಂದಿಯ ಬದಲಿಗೆ ಕನ್ನಡದಲ್ಲಿ ಕಮಾಂಡ್ ನೀಡುವ ಪದ್ಧತಿಗೆ ನಾಂದಿ ಹಾಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪರೇಡ್ ಅಥವಾ ಗೌರವ ವಂದನೆಯಲ್ಲಿ ಪೊಲೀಸರು ಹಿಂದಿಯಲ್ಲಿ ಕಮಾಂಡ್ ಮಾಡುವುದು ಸಾಮಾನ್ಯ. ಇದೀಗ ಹಳೆಯ ಸಂಪ್ರದಾಯದ ಬದಲಿಗೆ ಕನ್ನಡದಲ್ಲಿ ಕಮಾಂಡ್ ನೀಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚಿಸಿದ್ದಾರೆ.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಕನ್ನಡದಲ್ಲೇ ಕಮಾಂಡ್ ನೀಡುತ್ತಿದ್ದಾರೆ.
ಟ್ವೀಟ್ ಮಾಡಿದ ಪೊಲೀಸ್ ಆಯುಕ್ತರು:
ಕನ್ನಡ ಮಾತು ಚಂದ. ಕನ್ನಡದ ಕಮಾಂಡ್ ಇನ್ನು ಚೆಂದ. ಏನಂತಿರಾ ಎಂದು ಕನ್ನಡದಲ್ಲಿ ಕನ್ನಡದಲ್ಲೇ ಕಮಾಂಡ್ ನೀಡುತ್ತಿರುವ ವಿಡಿಯೋವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಎಕ್ಸ್ (ಟ್ವಿಟ್ಟರ್) ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಸಾವ್‌ಧಾನ್ ವಿಶ್ರಾಮ್ ಎಂಬ ಕಮಾಂಡ್ ಬದಲಾಗಿ, ಪಹರ ಪಡೆ ವಂದನಾ ಶಸ್ತ್ರ ಮತ್ತು ಪಹರ ಪಡೆ ಕೆಳ ಶಸ ಎಂಬ ಪದ ಬಳಕೆ ಮಾಡಲಾಗುತ್ತಿದೆ. ಮಾನ್ಯರೇ ಪಹರ ಪಡೆಯು ತಮ್ಮ ಪರಿವೀಕ್ಷಣೆಗೆ ಸಜ್ಜಾಗಿದೆ. ಪಹರ ಪಡೆ ಪಹರ ಹೊರತುಪಡಿಸಿ ಇನ್ನುಳಿದ ಪಹರ ಪಡೆ ಮೊದಲು ಶಸ. ಪಹರ ಪಡೆ ಪಹರ ಹೊರತುಪಡಿಸಿ ಇನ್ನುಳಿದ ಪಹರ ಪಡೆ ಶಸ ವಿಸರ್ಜನೆ ಎಂದು ಬಳಸಲಾಗುತ್ತಿದೆ. ಕನ್ನಡ ರಾಜೋತ್ಸವಕ್ಕೆ ಒಂದು ತಿಂಗಳಿರುವಾಗಲೇ ಕನ್ನಡದಲ್ಲಿಯೇ ಕಮಾಂಡ್ ನೀಡಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ಯವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net