ಸರ್ಕಾರಿ ಹುದ್ದೆಗೆ ಬೈ, ಬೇಸಾಯಕ್ಕೆ ಜೈ

 ಕಾಫಿ ತೋಟ.
ಕಾಫಿ ತೋಟ.
Published on

ಸುಂಟಿಕೊಪ್ಪ: ಸರ್ಕಾರಿ ಹುದ್ದೆ ತ್ಯಜಿಸಿ ಪಾಲಕರೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಜೀವನ ನಡೆಸುವ ಮೂಲಕ ಇಲ್ಲೊಬ್ಬ ರೈತರು ಇತರರಿಗೆ ಮಾದರಿಯಾಗಿದ್ದಾರೆ.

ಹೋಬಳಿಯ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್‌ಮೊಟ್ಟೆ ಗ್ರಾಮದ ನಿವಾಸಿ ಎಸ್.ಜಿ.ಶ್ರೀನಿವಾಸ್ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹತ್ತಾರು ಕುಟುಂಬಕ್ಕೆ ನೆರವಾಗಿದ್ದಾರೆ. ಕೃಷಿಯೊಂದಿಗೆ ನರ್ಸರಿ, ರಾಸಾಯನಿಕ ಗೊಬ್ಬರ, ಕೃಷಿಕರಿಗೆ ಯಂತ್ರೋಪಕರಣ, ಬಯೋ ಕೆಮಿಕಲ್ಸ್ ಮಾರಾಟ ಮಳಿಗೆಯೊಂದಿಗೆ ಕೃಷಿಕರಿಗೆ ಮಾಹಿತಿ ಒದಗಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಎಸ್.ಕೆ.ಗೋವಿಂದಪ್ಪ ಹಾಗೂ ಸೀತಮ್ಮ ದಂಪತಿ ಪುತ್ರನಾದ ಶ್ರೀನಿವಾಸ್ ಪದವಿ ಶಿಕ್ಷಣ ಪಡೆದು ನಂತರ ಬಾಳೆಹೊನ್ನೂರಿನಲ್ಲಿ 1979 ರಿಂದ 1981 ರವರೆಗೆ ಕಾಫಿ ಬೋರ್ಡ್‌ನಲ್ಲಿ ಕೃಷಿ ತರಬೇತುದಾರರಾಗಿದ್ದರು. ಆದರೆ ಸರ್ಕಾರಿ ಹುದ್ದೆ ಸರಿ ಹೊಂದದ ಹಿನ್ನೆಲೆಯಲ್ಲಿ ಆ ಹುದ್ದೆ ತ್ಯಜಿಸಿ ಕೃಷಿ ಚಟುವಟಿಕೆಯತ್ತ ಮುಖ ಮಾಡಿದರು. ನಂತರ ಕೊಡಗಿಗೆ ಆಗಮಿಸಿದ ಅವರು 12 ಎಕರೆ ಕಾಫಿ ತೋಟ ಖರೀದಿಸಿ ಅಲ್ಲಿ ಕಾಫಿ, ಕರಿಮೆಣಸು, ಏಲಕ್ಕಿ ಕೃಷಿ ಆರಂಭಿಸಿದರು. ಇದರ ನಡುವೆ ಕೆಲವು ತೋಟಗಳಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುವ ಮೂಲಕ ತೋಟಗಳ ನಿರ್ವಹಣೆ ಕಾಯಕದಲ್ಲಿ ತೊಡಗಿಸಿಕೊಂಡರು. ಇದರ ಪರಿಣಾಮ ಪ್ರಸ್ತುತ ಉತ್ತಮ ಬೆಳೆಗಾರರು ಹಾಗೂ ಉದ್ಯಮಿಯಾಗಿ ರೂಪುಗೊಂಡಿದ್ದಾರೆ.

ಎರಡೂವರೆ ದಶಕಗಳಿಂದ ಕೃಷಿ ಚಟುವಟಿಕೆಯಲ್ಲಿ ಶ್ರೀನಿವಾಸ್ ನಿರತರಾಗಿದ್ದು, ವಾರ್ಷಿಕ ಫಸಲಿನ ಕೃಷಿಯೊಂದಿಗೆ ಅಲ್ಪಕಾಲದ ಬೆಳೆಗಳನ್ನೂ ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಿದ್ದಾರೆ. ಪೂರ್ವಜರರಿಂದ ಬಂದ ಕಾಫಿ ತೋಟದಲ್ಲಿ ಇದೀಗ ಕಾಫಿ, ಕರಿಮೆಣಸು, ಏಲಕ್ಕಿ, ಅಡಕೆ, ತೆಂಗು, ವಿವಿಧ ತಳಿಯ ಬೆಣ್ಣೆ ಹಣ್ಣು, ಹಲಸು, ರಾಂಬೂಟ್, ಅಂಥೋರಿಯಂ ಹೂಗಳ ಕೃಷಿ ಮಾಡಿದ್ದಾರೆ. ಇದರೊಂದಿಗೆ ನರ್ಸರಿಯನ್ನೂ ನಿರ್ವಹಣೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಣ್ಣಿನ ಗಿಡಗಳ ಬಗ್ಗೆ ಹೆಚ್ಚಿನ ಒಲವು ಮೂಡಿ ಬಂದ ಹಿನ್ನೆಲೆಯಲ್ಲಿ ವಿವಿಧ ತಳಿಯ ಬೆಣ್ಣೆಹಣ್ಣು, ರಾಂಬೂಟ್, ಕಿತ್ತಳೆ ಗಿಡಗಳನ್ನು ಬೆಳೆಸುವ ಮೂಲಕ ತನ್ನದೆಯಾದ ಗ್ರಾಹಕ ವೃಂದವನ್ನು ಸೃಷ್ಟಿಸಿಕೊಂಡು ಬೇಡಿಕೆಗೆ ತಕ್ಕಂತೆ ಹಣ್ಣುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ವಾರ್ಷಿಕವಾಗಿ ಒಂದು ಎಕರೆಗೆ ಕನಿಷ್ಠ 4 ರಿಂದ 5 ಲಕ್ಷ ರೂ. ಆದಾಯ ಕಂಡುಕೊಂಡಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿ ಕೃಷಿಗೆ ಪೂರಕವಾದ ಕೀಟನಾಶಕ, ರಸಗೊಬ್ಬರ ಹಾಗೂ ಯಂತ್ರೋಪಕರಣಗಳ ಉದ್ಯಮವನ್ನೂ ನಡೆಸುತ್ತಿರುವ ಶ್ರೀನಿವಾಸ್, ನುರಿತ ವಿಜ್ಞಾನಿಗಳು ಹಾಗೂ ತಜ್ಞರಿಂದ ಮಾಹಿತಿ ಕಾರ್ಯಾಗಾರ ಆಯೋಜಿಸುತ್ತಿದ್ದಾರೆ. ಕೃಷಿ ಚಟುವಟಿಕೆ ಸಂದರ್ಭದಲ್ಲಿ ಭೂಮಿಯ ಫಲವತ್ತತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳ ಕುರಿತು ಕೃಷಿಕರಿಗೆ ಮಾಹಿತಿ ಒದಗಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ತೋಟದಲ್ಲಿ ಬೆಳೆಗಳು ಹಾಗೂ ಕೆಲವು ತರಕಾರಿ ಬೆಳೆಗಳಿಗೆ ಲೋಡ್‌ಗಟ್ಟಲೇ ಸಗಣಿ ಗೊಬ್ಬರ ಪೂರೈಕೆ ಮಾಡುಡುತ್ತಿದ್ದಾರೆ. ಆ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲಾಗಿದೆ. ನೈಸರ್ಗಿಕವಾಗಿ ಬೀಳುವ ಮಳೆಯನ್ನೇ ಅವಲಂಬಿಸಿ ಕೃಷಿ ಕಾರ್ಯ ಮಾಡುತ್ತಿರುವುದು ಮತ್ತೊಂದು ಅಚ್ಚರಿಯ ಸಂಗತಿ. ಕೆಲವು ಸಂದರ್ಭಗಳಲ್ಲಿ ಮಳೆ ಕುಂಠಿತವಾದಾಗ ಕೆರೆ ಹಾಗೂ ಕೊಳವೆ ಬಾವಿಯಿಂದ ಕಾಲ ಕಾಲಕ್ಕೆ ನೀರು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕಾರ್ಮಿಕರ ಸಮಸ್ಯೆ ಎಲ್ಲೆ ಮೀರಿದೆ ತಾವೇ ಕಾರ್ಮಿಕರಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಸಾಧನೆ ಮಾಡಲು ಸಾಧ್ಯವಾಗಿದೆ. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಂಡಿರುವ ಇವರ ಕಾರ್ಯಕ್ಕೆ ಪತ್ನಿ ವಿಜಯಲಕ್ಷ್ಮೀ ಸಾಥ್ ನೀಡುತ್ತಿದ್ದಾರೆ. ಈ ದಂಪತಿಗೆ ಒಬ್ಬ ಪುತ್ರಿ, ಒಬ್ಬ ಪುತ್ರ ಇದ್ದು, ಪುತ್ರಿ ಉನ್ನತ ಶಿಕ್ಷಣ ಮುಗಿಸಿ ವಿವಾಹವಾಗಿದ್ದರೆ, ಪುತ್ರನೂ ಉನ್ನತ ಶಿಕ್ಷಣ ಮುಗಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀನಿವಾಸ್ ಅವರ ಕೃಷಿಯಲ್ಲಿನ ಆಸಕ್ತಿ ಮತ್ತು ಕೃಷಿ ಪರವಾದ ಚಟುವಟಿಕೆಗಳಿಗಾಗಿ ವಿವಿಧ ಕೃಷಿ ವಸ್ತು ಉತ್ಪಾದನಾ ಸಂಸ್ಥೆಗಳು ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳಿಂದ ಪ್ರಶಸ್ತಿಗಳೂ ದೊರೆತಿವೆ.

ಸರ್ಕಾರ ಕೃಷಿ ಇಲಾಖೆ ಮೂಲಕ ಒದಗಿಸುತ್ತಿರುವ ಸವಲತ್ತುಗಳನ್ನು ಪಡೆದುಕೊಂಡು ಕಾಲಕಾಲಕ್ಕೆ ಭೂಮಿಗೆ ಗೊಬ್ಬರ ಹಾಕುವ ಮೂಲಕ ಮಣ್ಣಿನ ಫಲವತ್ತತೆ, ತೇವಾಂಶ ಕುರಿತು ಕೃಷಿಕರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇನೆ. ಹವಾಮಾನ ವೈಪರೀತ್ಯದಿಂದ ಮಳೆಯಲ್ಲಿ ಏರುಪೇರಾಗದಿದ್ದರೆ ವಾರ್ಷಿಕವಾಗಿ 4 ರಿಂದ 5ಲಕ್ಷ ರೂ. ಆದಾಯ ಗಳಿಸಬಹುದು. ಒಂದೇ ಬೆಳೆ ಅಥವಾ ವಾರ್ಷಿಕ ಫಸಲನ್ನು ನಂಬಿದ ಸಂದರ್ಭದಲ್ಲಿ ಅಕಾಲಿಕ ಮಳೆ, ಕಾರ್ಮಿಕರ ಕೊರತೆ, ವನ್ಯಪ್ರಾಣಿಗಳ ಹಾವಳಿ, ಇಳುವರಿ ಕಡಿತ ಹಾಗೂ ಬೆಲೆ ಏರುಪೇರುಗಳಿಂದಾಗಿ ಲಾಭ-ನಷ್ಟಗಳ ತೂಗುಯ್ಯಲೆಯಲ್ಲಿ ಕೃಷಿಕ ಇರಬೇಕಾಗುತ್ತದೆ. ಹಾಗಾಗಿ ಅಲ್ಪಕಾಲದ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ಉಂಟಾಗುವ ಲಾಭ ನಷ್ಟದ ಏರುಳಿತಗಳನ್ನು ಸರಿದೂಗಿಸಿಕೊಳ್ಳಬಹುದು.

ಎಸ್.ಜಿ.ಶ್ರೀನಿವಾಸ್ ಕೃಷಿಕ, ಪೊನ್ನತ್‌ಮೊಟ್ಟೆ ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net