ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಮೊದಲ ದಿನ ಉತ್ತಮ ಜನಸ್ಪಂದನೆ

raichur
raichur
Published on

ರಾಯಚೂರು ದೇಶದ ಆರ್ಥಿಕತೆಯಲ್ಲಿ ಹಾಗೂ ಸದೃಢ ದೇಶ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಸೋಮವಾರ ಜಿಲ್ಲ ಮತ್ತು ತಾಲೂಕು ಮಹತ್ವಾಕಾಂಕ್ಷೆ ಹಾತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಮಹಿಳೆಯರು ಮನೆಯಲ್ಲಿ ಉತ್ಪಾದನೆ ಮಾಡಿದ ದೇಶಿ ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕು.

ತಮ್ಮ ಮನೆಯಲ್ಲಿನ ಡಬ್ಬಿಗಳಲ್ಲಿ ಕೂಡಿಡುವ ಅಲ್ಪ ಹಣವೇ ಅವರಿಗೆ ಅವಶ್ಯಕ ಸಂದರ್ಭದಲ್ಲಿ ಸಹಾಯಕ ಬರುತ್ತದೆ. ಕೆಲ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿ ಮಾರಾಟ ಮಾಡಿದಲ್ಲಿ ಕುಟುಂಬ ನಡೆಸಲು ಅನುಕೂಲವಾಗುತ್ತದೆ. ಮನೆಯಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಬೇರೆಯವರಿಗೆ ತಲುಪಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕೊರಗು ಇದೆ. ಇಂತಹ ಮೇಳಗಳ ಮೂಲಕ ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ಬ್ರಾಂಡ್ ಮಾಡಿಕೊಂಡು ಹೆಸರುವಾಸಿಯಾಗಬೇಕು ಎಂದರು.

ಒಂದು ವಾರಗಳ ಕಾಲ ನಡೆಯುವ ಮೇಳದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹೆಚ್ಚು ಗ್ರಾಹಕರನ್ನು ಸೆಳೆಯಬೇಕು. ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ಮಾರಾಟ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಿ ಮತ್ತೊಬ್ಬರಿಗೆ ಮಾದರಿಯಾಗಬೇಕು. ಸ್ವಯಂ ಉದ್ಯಮಿಗಳಾಗಬೇಕು ಎಂದು ಸಲಹೆ ಮಾಡಿದರು.

ಪಾಲಿಕೆಯ ಉಪ ಆಯುಕ್ತೆ ಸಂತೋಷ್ ರಾಣಿ ಮಾತನಾಡಿ, ದೇಶದ ಶೇ.60ರಷ್ಟು ಆರ್ಥಿಕ ಶಕ್ತಿಯು ಅದು ಮನೆಮನೆಗಳಿಂದಲೇ ಸಾಧ್ಯಾಗುತ್ತಿದೆ. ಮನೆಯಲ್ಲಿಯೇ ಉತ್ಪಾದನೆ ಮಾಡುವ ಉತ್ಪನ್ನಗಳಿಗೆ ಬ್ರಾಂಡ್ ಇಲ್ಲದೇ ಇರುವುದರಿಂದ ಮಾರಾಟ ವ್ಯವಸ್ಥೆ ಸವಾಲಿನಂತಾಗಿರುತ್ತದೆ. ಉತ್ಪನ್ನಕ್ಕೆ ಒಂದು ಹೆಸರು ಕೊಟ್ಟು ಇಂತಹ ಮೇಳದಲ್ಲಿ ಪರಿಚಯಿಸಬೇಕು. ಮಹಿಳೆಯರು ಉತ್ತಮ ಅಡುಗೆ ಕೌಶಲ್ಯ ಬೆಳೆಸಿಕೊಂಡು ಸಾಂಪ್ರದಾಯಿಕ ರೀತಿಯಲ್ಲಿ ಮಾಡಿದಲ್ಲಿ ಉತ್ತಮ ರೀತಿಯ ಮಾರುಕಟ್ಟೆ ಸಿಕ್ಕು ಸ್ವಾವಲಂಬಿಗಳಾಗಿ ಆರ್ಥಿಕ ಸದೃಢರಾಗಲು ಸಾಧ್ಯವೆಂದರು.

ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕ ಡಾ.ಟಿ.ರೋಣಿ, ಜಿಲ್ಲಾ ಕೌಶಲ್ಯಾಧಿಕಾರಿ ಜಿ.ಯು.ಹುಡೇದ್, ಉದ್ಯೋಗ ವಿನಿಮಯ ಅಧಿಕಾರಿ ನವೀನ್ ಕುಮಾರ, ಸ್ವ-ಸಹಾಯ ಗುಂಪುಗಳ ತಾಲೂಕು ಅಧ್ಯಕ್ಷೆ ಲಲಿತಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸ್ವ-ಸಹಾಯ ಗುಂಪುಗಳ ಮಹಿಳೆಯರು ಮೇಳದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳನ್ನು ಉತ್ತೇಜಿಸುವ ಆಕಾಂಕ್ಷ ಹಾತ್ ಕಾರ್ಯಕ್ರಮದಡಿ ಉದ್ಯಾನವನದಲ್ಲಿ ಸುಮಾರು 23 ಸ್ಟಾಲ್‌ಗಳನ್ನು ಹಾಕಲಾಗಿದ್ದು, ಬಗೆಬಗೆಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಜನಮನ ಸೆಳೆಯುತ್ತಿದೆ. ಮೊದಲ ದಿನ ಬೆಳಗ್ಗೆಯಿಂದ ಸಂಜೆ ವೇಳೆಗೆ ಸುಮಾರು 2500ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net