

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಮಲ್ಟಿ ಸ್ಪೆಷಾಲ್ಟಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸಾ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗಬೇಕೆಂಬ ದೂರ ದೃಷ್ಟಿ ಇಟ್ಟುಕೊಂಡು ಹಂತ ಹಂತವಾಗಿ ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಯಿ ಮಕ್ಕಳ ಆಸ್ಪತ್ರೆಯನ್ನು 60ರಿಂದ 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ 8.75ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ, ದಾನಿಗಳು ನೀಡಿದ 93ಲಕ್ಷ ರೂ. ವೆಚ್ಚದ ಆರೋಗ್ಯ ಉಪಕರಣಗಳ ಸ್ವೀಕೃತಿ ಮತ್ತು ಸಾಂಕ್ರಾಮಿಕ ರೋಗಗಳಿಗೆ ಅರಿವು ಮೂಡಿಸುವ ವಾಹನ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆಯನ್ನು 50 ರಿಂದ 100 ಹಾಸಿಗೆಗಳ ಮೇಲ್ದರ್ಜೆಗೆ ಏರಿಸುವ ಕನಸು ನನಸಾಯಿತು. ಆದರೆ, ಕೇಂದ್ರ ಸರ್ಕಾರದ ಯೋಜನೆಯಡಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ತೆರೆದು ಎರಡು ಆಸ್ಪತ್ರೆಗಳಲ್ಲಿ 300 ಹಾಸಿಗೆ ಸ್ಥಾಪಿಸಿ ಚಿಂತಾಮಣಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಯೋಜನೆ ಹೊಂದಿದ್ದೆ. ಆದರೆ ಆ ಕನಸು ನನಸಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯ ಕಚೇರಿಗಳಿದ್ದ ಒಂದು ಎಕರೆ ಜಾಗವನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮಂಜೂರು ಮಾಡಿಸಿ, ಲೋಕೋಪಯೋಗಿ ಇಲಾಖೆಗೆ ಬೇರೆ ಜಾಗವನ್ನು ನೀಡಲಾಯಿತು. ನಗರದಿಂದ ಕೇವಲ ಐದು ಕಿಲೋ ಮೀಟರ್ ದೂರದಲ್ಲಿರುವ ವಡಗನಹಳ್ಳಿ ಸಮೀಪದ 19 ಎಕರೆ ಕರಿಗುಟ್ಟ ಸ್ಥಳವನ್ನು ಮೆಡಿಕಲ್ ಕಾಲೇಜಿಗೆ ಗುರುತಿಸಿದ್ದೆ. ಆದರೆ ಜನ ಎರಡು ಚುನಾವಣೆಯಲ್ಲಿ ಜನ ಕೊಟ್ಟ ತೀಮಾರ್ನದಿಂದ ಅದು ನೆರವೇರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನೆರವಾದ ಶಿಡ್ಲಘಟ್ಟದ ನಿವೃತ್ತ ಇಂಜಿನಿಯರ್ ಗಣೇಶ್, ಅಂದಿನ ಅರೋಗ್ಯ ಸಚಿವ ಅರವಿಂದ ಲಿಂಬಾವಳಿ, ಆಗಿನ ಸಂಸದ ಧೃವನಾರಾಯಣ್ ಸೇರಿದಂತೆ ಹಲವಾರು ಅಧಿಕಾರಿಗಳ ಸಹಕಾರದಿಂದ ಕೇಂದ್ರಕ್ಕೆ ಶಿಫಾರಸು ಮಾಡಿದ 40 ಆಸ್ಪತ್ರೆಗಳ ಪೈಕಿ ಕೇವಲ 11 ಮಂಜೂರಾಗಿದ್ದು, ಅದರಲ್ಲಿ ಚಿಂತಾಮಣಿಯೂ ಒಂದಾಗಿದೆ ಎಂದರು.
ಕರೊನಾ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯ ಶೌಚಗೃಹ ಮತ್ತಿತರ ದುಸ್ಥಿತಿ ಕಂಡು ಮುಂದೆ ಅವಕಾಶ ಬಂದರೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಗುರಿ ಹೊಂದಿದ್ದೆ. ಆ ಅವಕಾಶ ಈಗ ಒದಗಿ ಬಂದಿದ್ದು, ಕಾರ್ಯಗತ ಮಾಡಲಾಗುವುದು ಎಂದು ಹೇಳಿದರು.
ಸಂಸದ ಎನ್.ಮುನಿಸ್ವಾಮಿ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಗಾಂಧೀಜಿ ಕಂಡ ಕನಸ್ಸನ್ನು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ಸಾಕಾರಗೊಳಿಸುತ್ತಿದೆ. ಮುಖ್ಯವಾಗಿ ಮೂಲ ಸೌಲಭ್ಯಗಳನ್ನು ಕೊಟ್ಟು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆ, ಬೀದಿ ವ್ಯಾಪಾರಿಗಳಿಗೆ ಧನಸಹಾಯ ವಿತರಣೆ ಸೇರಿದಂತೆ ಹಲವಾರು ಯೋಜನೆಗಳು ಸಾಕಷ್ಟಿದ್ದು, ಅವುಗಳ ಪ್ರಯೋಜನ ಪಡೆಯಬೇಕು ಎಂದರು.
ಡಿಎಚ್ಒ ಡಾ.ಮಹೇಶ್ ಕುಮಾರ್, ತಹಸೀಲ್ದಾರ್ ಸುದರ್ಶನ್ ಯಾದವ್, ತಾಪಂ ಇಒ ಎಸ್.ಆನಂದ್, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಟಿಎಚ್ಒ ಡಾ.ರಾಮಚಂದ್ರರೆಡ್ಡಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಎಸ್. ಸಂತೋಷಕುಮಾರ್, ಆರೋಗ್ಯ ಮತ್ತು ಕುಟುಂಬ ಇಲಾಖೆಯ ಕಾರ್ಯ ಪಾಲಕ ಇಂಜಿನಿಯರ್ ಎಂ.ಜೆ.ಯೋಗೇಶ್, ಕೋಲಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಶಿವಕುಮಾರ್ ಇತರರು ಇದ್ದರು.
ಮೃತ ತನುಶ್ರೀಗೆ ಸಹಾಯಧನ
ಹಠಾತ್ ಮೃತಪಟ್ಟ ಗಡಿಗವಾರಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ತನುಶ್ರೀ ಎಂಬ ವಿದ್ಯಾರ್ಥಿನಿ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರದ ಧನದ ಚೆಕ್ ಅನ್ನು ಸಚಿವ ಸುಧಾಕರ್, ಸಂಸದ ಮುನಿಸ್ವಾಮಿ ವಿತರಿಸಿದರು.
ದಾನಿಗಳಿಗೆ ಸನ್ಮಾನ
ಚಿಂತಾಮಣಿ ಆಸ್ಪತ್ರೆ ಸೇರಿದಂತೆ ಜಿಲ್ಲಾ ಕೇಂದ್ರ ಆಸ್ಪತ್ರೆ ಹಾಗೂ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೇಕಾದ 93 ಲಕ್ಷ ರೂ.ಗಳ ಆರೋಗ್ಯ ಉಪಕರಣಗಳನ್ನು ನೀಡಿದ ಸಿಂಗಾಪುರ ಮೂಲದ ಎಲ್ ಅಂಡ್ ಡಬ್ಲ್ಯುಕನ್ಸ್ಟ್ರಕ್ಷನ್ ಪೆವೆಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಅಸೈತಂಬಿ ಮಾಣಿಕ್ಯಂ ಮತ್ತು ದಾನಿಗಳನ್ನು ಪರಿಚಯಿಸಿದ ಓಂ ಪಾಲಿ ಕ್ಲಿನಿಕ್ನ ವೈದ್ಯ ಡಾ.ಎಂ.ವಿ.ಅಶೋಕ್ ಕುಮಾರ್ ಮತ್ತು ಅವರ ಪತ್ನಿ ಡಾ.ಅನಿತಾ ಅವರನ್ನು ಸನ್ಮಾನಿಸಲಾಯಿತು.