

ವಿಜಯವಾಣಿ ಸುದ್ದಿಜಾಲ ಧಾರವಾಡ
ಉತ್ತಮ ಶಿಕ್ಷಕರಿಂದ ವಿದ್ಯಾಸಂಸ್ಥೆಗಳು ಅತ್ಯುತ್ತಮವಾಗಿ ಬೆಳೆಯಲು ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ವೃತ್ತಿಪರರನ್ನಾಗಿಸುವುದರೊಂದಿಗೆ ದೇಶದ ಗೌರವಾನ್ವಿತ ನಾಗರಿಕರನ್ನಾಗಿ ರೂಪಿಸುತ್ತಾರೆ ಎಂದು ಎಸ್‌ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ್ ಹೇಳಿದರು.
ನಗರದ ಎಸ್‌ಡಿಎಂ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಪದವಿಗಳನ್ನು ಪಡೆಯುವುದು ಮಾತ್ರವಲ್ಲದೆ, ಹೊಸ ಜ್ಞಾನವನ್ನು ಸಂಪಾದಿಸುವುದಾಗಿದೆ ಎಂದರು.
ಎಸ್‌ಡಿಎ0 ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಕಿರಣ್ ಆರ್. ಐತಾಳ್, ಕೃತಕ ದಂತ ವಿಭಾಗದ ಅಧ್ಯಾಪಕ ಡಾ. ಮುರಿಗೆಪ್ಪ ಎಸ್. ಕೌದಿ ಮತ್ತು ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜೀವಕುಮಾರ ಲಾಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್ ಮತ್ತು ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿ ವಿ. ಜೀವಂಧರ್‌ಕುಮಾರ್, ಕುಲಸಚಿವ ಡಾ. ಚಿದೇಂದ್ರ ಎಂ. ಶೆಟ್ಟರ್ ಮತ್ತು ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಅಂಗ ಸಂಸ್ಥೆಗಳ ಪ್ರಾಚಾರ್ಯರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಸ್ವಾಮಿ ಕಳಸೂರಮಠ, ಡಾ. ಹರಿಕೇಶ ರಾವ್ ಮತ್ತು ಡಾ. ಎಲಿಶ್ ಜೀಡಿ ಪರಿಚಯಿಸಿದರು. ಡಾ. ಶ್ರೀಯಾ ಗಾಂವ್ಕರ್ ಸ್ವಾಗತಿಸಿದರು. ಡಾ. ಸೌಮ್ಯ ನಿರೂಪಿಸಿದರು. ಡಾ. ಚಾಂದನಿ ವಂದಿಸಿದರು.