

ಬಾದಾಮಿ: ಸಮಾಜಕ್ಕೆ ಪೂರಕವಾಗುವ ಕಥಾ ಹಂದರವುಳ್ಳ ಸಿನಿಚಿತ್ರಗಳು ಸಮಾಜದ ಯುವ ಸಮೂಹವನ್ನು ಸರಿದಾರಿಗೆ ತರಲು ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ ಎಂದು ಜಿಎಂಕೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಎ. ಮಾಳವಾಡ ಹೇಳಿದರು.
ಬಾದಾಮಿಯ ಎಸ್.ಬಿ. ಮಮದಾಪುರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಕರ್ನಾಟಕ ಸಂಘದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚಲನಚಿತ್ರಗಳ ಪ್ರದರ್ಶನ, ಚರ್ಚೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಬಾಗಲಕೋಟೆ ವಿಶ್ವವಿದ್ಯಾಲಯದ ಪದವಿ ಪಠ್ಯಕ್ರಮದಲ್ಲಿ ಅಳವಡಿಸಿದೆ. ಮುತ್ತಿನ ಹಾರ, ಮತದಾನ ಹಾಗೂ ಯುವರತ್ನ ಚಲನಚಿತ್ರಗಳು ಅತ್ಯಂತ ಸಮಾಜಕ್ಕೆ ಪೂರಕವಾದ ಕಥಾ ಹಂದರವುಳ್ಳದ್ದು ಆಗಿವೆ. ಜೊತೆಗೆ ಒಂದೊಂದು ಸಿನಿಮಾದಲ್ಲಿ ವಿದ್ಯಾರ್ಥಿಗಳಿಗೆ ಅರಿತುಕೊಳ್ಳುವಂತಹ ಕಥೆಗಳಿವೆ. ಮುತ್ತಿನ ಹಾರ ಸಿನಿಮಾದಲ್ಲಿ ಯುದ್ಧದ ಪರಿಣಾಮಗಳ ಚಿತ್ರವಿದ್ದರೆ, ಮತದಾನ ಚಿತ್ರದಲ್ಲಿ ಅಧಿಕಾರದ ದುರ್ಬಳಕೆಯ ಕಥೆ ಇದೆ. ಯುವರತ್ನ ಸಿನಿಮಾದಲ್ಲಿ ಪ್ರಸ್ತುತ ಶಿಕ್ಷಣದ ವ್ಯಾಪಾರೀಕರಣದ ಪರಿಣಾಮವನ್ನು ತೋರಿಸಲಾಗಿದೆ ಎಂದು ತಿಳಿಸಿದರು.
ರಂಗಭೂಮಿ ಮತ್ತು ಚಲನಚಿತ್ರ ನಟರಾದಂತಹ ಹನುಮಂತ ಚಲವಾದಿ ಪಾಲ್ಗೊಂಡು ಪ್ರಸ್ತುತ ಚಲನಚಿತ್ರಗಳ ಕುರಿತು ಮಾತನಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಕೆ. ಕಟ್ಟಿಮನಿ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕ ಎಸ್.ಎಚ್. ಸಂಕನಗೌಡ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಡಾ. ಸುಜಾತಾ ಮಾಜಿಗೌಡರ್ ನಿರೂಪಿಸಿದರು. ವಿದ್ಯಾರ್ಥಿನಿ ಕುಮಾರಿ ಪ್ರಿಯಾಂಕ ವಂದಿಸಿದರು.