ಹೆಸರು ಖರೀದಿಗೆ ರೈತರಿಂದ ಉತ್ತಮ ಬೆಂಬಲ

21-11-24
Published on

ವಿಕ್ರಮ ನಾಡಿಗೇರ ಧಾರವಾಡ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿ ಹೆಸರು ಬೆಳೆ ಖರೀದಿಗೆ ಆರಂಭಿಸಿರುವ ಪ್ರಕ್ರಿಯೆಗೆ ಜಿಲ್ಲೆಯ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ನೋಂದಣಿ ಅವಧಿ ವಿಸ್ತರಣೆ ಬಳಿಕ ಸಹ ಸಾವಿರಾರು ಜನರು ನೋಂದಣಿ ಮಾಡಿದ್ದಾರೆ. ಕಳೆದ ವರ್ಷ ಬರದಿಂದ ರೈತರು ಸಂಕಷ್ಟಕ್ಕೀಡಾಗಿದ್ದರು. ಈ ಬಾರಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಗುರಿ (67150 ಹೆಕ್ಟೇರ್​)ಗಿಂತ ಹೆಚ್ಚಿನ ಕ್ಷೇತ್ರದಲ್ಲಿ (ಸುಮಾರು 90 ಸಾವಿರ ಹೆಕ್ಟೇರ್​) ಹೆಸರು ಬಿತ್ತನೆಯಾಗಿತ್ತು. ಉತ್ತಮ ಮಳೆಯಿಂದ ಭರಪೂರ ಫಸಲು ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇರದ ಕಾರಣ ಬೆಂಬಲ ಬೆಲೆ ಅಡಿಯೇ ಹೆಸರು ನೀಡಲು ರೈತರು ಹೆಚ್ಚು ಆಸಕ್ತರಾಗಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದಿಂದ ಎಫ್ಎಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿ ಮಾಡಲಾಗುತ್ತಿದೆ. ಪ್ರತಿ ಕ್ವಿಂಟಾಲ್​ಗೆ 8,682 ರೂ. ದಂತೆ ಒಬ್ಬ ರೈತನಿಂದ ಗರಿಷ್ಠ 10 ಕ್ವಿಂಟಾಲ್​ (ಪ್ರತಿ ಎಕರೆಗೆ 2 ಕ್ವಿಂಟಾಲ್​) ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ಅದರಂತೆ ಆ.24ರಿಂದ ಅ. 7ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಅಂದಾಜು 9 ಸಾವಿರ ರೈತರು ನೋಂದಣಿ ಮಾಡಿಸಿದ್ದರು. ಬಳಿಕ ಆ ಅವಧಿಯನ್ನು ನ. 18ರವರೆಗೆ ವಿಸ್ತರಿಸಿದ ಪರಿಣಾಮ ಜಿಲ್ಲೆಯಲ್ಲಿ ಒಟ್ಟು 15,636 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ವರ್ಷದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವು 1,17,000 ಕ್ವಿಂಟಾಲ್​ ಹೆಸರು ಕಾಳು ಗುರಿ ಹೊಂದಿದೆ. ಈಗಾಗಲೇ ನ. 19ರವರೆಗೆ 7950 ರೈತರಿಂದ 58,895 ಕ್ವಿಂಟಾಲ್​ ಖರೀದಿ ಮಾಡಲಾಗಿದೆ. ಡಿ. 18ರವರೆಗೆ ಖರೀದಿಗೆ ಅವಕಾಶವಿದ್ದು, ಗುರಿ ತಲುಪುವ ಸಾಧ್ಯತೆ ಇದೆ. ಹೆಸರು ಬೆಳೆ ಭರಪೂರ ಬಂದಿದ್ದರೂ ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂತಹ ಬೆಲೆ ಇಲ್ಲವಾಗಿದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 5 ರಿಂದ 6 ಸಾವಿರ ರೂ. ಮಾತ್ರ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಬಹುತೇಕ ರೈತರು ಬೆಂಬಲ ಬೆಲೆಯಲ್ಲೇ ಹೆಸರು ನೀಡಲು ಮುಂದಾಗಿದ್ದಾರೆ. ಆದರೆ ಬೆಂಬಲ ಬೆಲೆಯಲ್ಲಿ 10 ಕ್ವಿಂಟಾಲ್​ ಮಾತ್ರ ಖರೀದಿ ಮಾಡುತ್ತಿರುವುದು ಬೇಸರವಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿದರೆ ಅನುಕೂಲ. ಇದರ ಜತೆಗೆ ಈಗ ನಿಗದಿ ಮಾಡಿರುವ ಶೇ.12 ತೇವಾಂಶ ಪ್ರಮಾಣವನ್ನು ಶೇ.14ಕ್ಕೆ ಏರಿಕೆ ಮಾಡಿದರೆ ಸಹಕಾರವಾಗಲಿದೆ ಎಂಬುದು ರೈತರ ಒತ್ತಾಸೆ.

*ವಿನಯ ಪಾಟೀಲ, ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ

ಜಿಲ್ಲೆಯಲ್ಲಿ 21 ಹೆಸರು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಕಾಳುಗಳ ಖರೀದಿ ಮಾಡಲಾಗುತ್ತಿದೆ. ಕಾಳು ನೀಡಿದ ರೈತರ ಪೈಕಿ 1852 ರೈತರ ಬ್ಯಾಂಕ್​ ಖಾತೆಗಳಿಗೆ ಈಗಾಗಲೇ ಹಣ ಸಹ ಜಮೆ ಮಾಡಲಾಗಿದೆ. ಉಳಿದವರಿಗೆ ಹಣ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಡಿ. 18ರವರೆಗೆ ಖರೀದಿಗೆ ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net